ADVERTISEMENT

ಕೆರೆಗೆ ಚರಂಡಿ ನೀರು: ಅಭಿವೃದ್ಧಿ ಶೂನ್ಯ

ಗ್ರಾಮಾಯಣ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 5:23 IST
Last Updated 4 ಮಾರ್ಚ್ 2014, 5:23 IST

ಹುಮನಾಬಾದ್‌: ತಾಲ್ಲೂಕಿನ ಸೇಡೋಳ ಗ್ರಾಮದಲ್ಲಿ ಮೂಲ­ಸೌಕರ್ಯ ಸಮಸ್ಯೆ ಕಾಡುತ್ತಿದೆ. 4ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಅಭಿವೃದ್ಧಿ ಕಡೆಗಣಿಸ­ಲಾಗಿದೆ.

ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಹಳೆಯದಾದ ಇಲ್ಲಿನ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಾಮದ ಬಹುತೇಕ ಕಡೆ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ ಚರಂಡಿ ನಿರ್ಮಿಸಿಲ್ಲ.

‘ಬಹುತೇಕ ಓಣಿಗಳ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿವೆ. ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ­ವಾಗಿಲ್ಲ. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ’ ಎಂಬುದು  ದಂಡೇಕರ್‌ ಓಣಿ ನಿವಾಸಿಗಳ ದೂರು.

ಚರಂಡಿ ತ್ಯಾಜ್ಯ ಹರಿಯುವುದಕ್ಕೆ ಅಗತ್ಯ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದ ಬಹುತೇಕ ಓಣಿಗಳ ತ್ಯಾಜ್ಯ ಇಲ್ಲಿನ ಕೆರೆಯಲ್ಲಿ ಸಂಗ್ರಹಗೊಳ್ಳುತ್ತಿದೆ. ಅತ್ಯಂತ ಹಳೆಯದಾದ ಈ ಕೆರೆಯಲ್ಲಿ ಚರಂಡಿ ನೀರೇ ತುಂಬಿಕೊಂಡಿದೆ. ಈ  ನೀರನ್ನೇ ಜಾನುವಾರುಗಳು ಕುಡಿಯುತ್ತವೆ.

ಇದರಿಂದ ಅವುಗಳಿಗೆ ರೋಗ ತಗಲುವ ಸಾಧ್ಯತೆಗಳಿವೆ. ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಕುಸಿದು ಬಿದ್ದು 6 ತಿಂಗಳು ಗತಿಸಿದರೂ ನೆಲಸಮಗೊಳಿಸಿಲ್ಲ.

ಕಟ್ಟಡದ ಅವಶೇಷ­ಗಳ ಪಕ್ಕದಲ್ಲೇ ವಿದ್ಯಾರ್ಥಿಗಳು ಆಟ ಆಡುತ್ತಾರೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಪಾಲಕರು ದೂರುತ್ತಾರೆ.

ಮಕ್ಕಳು, ಸಾರ್ವಜನಿಕರು ಆ ಮೂಲಕ ತೆರಳುವ ಸಾರ್ವಜನಿಕರು ಭೀತಿಯಲ್ಲಿ ಸಂಚರಿಸುವಂತಾಗಿದೆ ಕಟ್ಟಡವನ್ನು ಶೀಘ್ರ ನೆಲಸಮಗೊಳಿಸಿ, ಶಾಲೆಗೆ ಆವರಣಗೋಡೆ ನಿರ್ಮಿಸ­ಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯ.

ಇಲ್ಲಿನ ಶಾಲೆಯಲ್ಲಿ ಒಂದು ವರ್ಷದಿಂದ ಇಂಗ್ಲಿಷ್‌, ಗಣಿತ, ವಿಜ್ಞಾನ, ದೈಹಿಕ ಶಿಕ್ಷಕರ ಕೊರತೆ ಇದೆ. ಗ್ರಾಮದ ಜಲಸಂಗವಿ ರಸ್ತೆಯ ಬಳಿ ನಿರ್ಮಿಸಿದ ಉರ್ದು ಪ್ರಾಥಮಿಕ ಶಾಲಾ ಕಟ್ಟಡ ಹಾಳುಬಿದ್ದಿದೆ. ಇದರ ಸದ್ಭಳಕೆ ಆಗುವಂತೆ ನೋಡಿಕೊಳ್ಳ­ಬೇಕು. ಶಾಲೆಗೆ ಅಗತ್ಯ ಪ್ರಮಾಣದ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಕೆರೆ ಸ್ವಚ್ಛಗೊಳಿಸಿ’
‘ಗ್ರಾಮದ ಬ­ಹು­ತೇಕ ಚರಂಡಿ ತ್ಯಾಜ್ಯ ಕೆರೆ ಸೇರಿ­ದ್ದರಿಂದ ನೀರು ಮಲೀನ­ಗೊಳ್ಳು­ತ್ತಿದೆ. ಆ ನೀರು ಸೇವಿಸಿ ಜಾನುವಾರುಗಳಿಗೆ ರೋಗ ತಗುಲುವ ಸಾಧ್ಯತೆ ಇದೆ. ಶೀಘ್ರದಲ್ಲೇ ಕೆರೆಯನ್ನು ಸ್ವಚ್ಛ­ಗೊಳಿಸಬೇಕು. ಕುಸಿದು ಬಿದ್ದ ಶಾಲೆ ಕೊಠಡಿ ನೆಲಸಮಗೊಳಿಸಬೇಕು. ಕೊರತೆ ಇರುವ ಕಡೆ ಚರಂಡಿ ನಿರ್ಮಿ­ಸುವ ಕಾರ್ಯ ಕೈಗೆತ್ತಿಕೊಳ್ಳಬೇಕು’.
– ದಶರಥ ಮೇತ್ರೆ, ಗ್ರಾಮಸ್ಥ

‘ಸಮಸ್ಯೆ ಬಗೆಹರಿಸಲು ಯತ್ನ’
‘ಸೇಡೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಹಲವು  ಸಮಸ್ಯೆಗಳಿವೆ.
ಮುಂದಿನ ದಿನಗಳಲ್ಲಿ ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರಿಂದ ಹೆಚ್ಚುವರಿ ಅನುದಾನ ಪಡೆದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ’.
–ಶಿವರಾಜ ಕೊಳಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

‘ಚರಂಡಿ ನಿರ್ಮಿಸಲು ಕ್ರಮ’
‘ಗ್ರಾಮದ ಶಾಲಾ ಕೊಠಡಿ ನೆಲಸಮಗೊಳಿಸುವುದು, ಕೆರೆ ಸ್ವಚ್ಛಗೊಳಿಸುವುದು, ಅಗತ್ಯ  ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹುಣಸಗೇರಾ, ಕನಕಟ್ಟಾ, ಸೋನಕೇರಿ ಗ್ರಾಮಗಳಲ್ಲಿನ ಸಮಸ್ಯೆ ಬಗೆಹರಿಸಲು ಶ್ರಮಿಸುತ್ತೇನೆ’.
– ಜಗದೇವಿ ಪ್ರಕಾಶ ಕಾಡಗೊಂಡ,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.