ADVERTISEMENT

ಕೆರೆ ಒಡ್ಡು ದುರಸ್ತಿಗೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 6:45 IST
Last Updated 22 ಫೆಬ್ರುವರಿ 2011, 6:45 IST

ಹುಲಸೂರು: ಅಂತರ್ಜಲ ಹೆಚ್ಚಳ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶದಿಂದ ನಿರ್ಮಿಸಲಾಗಿದ್ದ ಕೆರೆಯು, ಈ ವರ್ಷ ಸುರಿದ ಭಾರಿ ಮಳೆಯ ಪರಿಣಾಮವಾಗಿ ಒಡ್ಡು ಒಡೆದು ನೀರಿಲ್ಲದೆ ತನ್ನ ಒಡಲನ್ನು ಬರಿದಾಗಿಸಿಕೊಂಡಿದೆ.

ಗ್ರಾಮದಿಂದ ಮುಚಳಂಬ ಗ್ರಾಮಕ್ಕೆ ಹೋಗುವ ರಸ್ತೆಯ ಬದಿಯಲ್ಲಿ 21 ವರ್ಷಗಳ ಹಿಂದೆ ಸರ್ಕಾರದಿಂದ ‘ಬಸಿಯುವ(ಜಿನುಗು) ಕೆರೆ ಯೋಜನೆ’ ಅಡಿಯಲ್ಲಿ ನಿರ್ಮಿಸಲಾಗಿತ್ತು. ಇದರಿಂದಾಗಿ ಇಲ್ಲಿನ ನೂರಾರು ಎಕರೆ ಪ್ರದೇಶದ ನೀರಾವರಿಗೆ ಸಹಕಾರಿಯಾಗಿತ್ತು. ಬಾವಿಗಳಲ್ಲಿ ಅಂತರ್ಜಲ ಹೆಚ್ಚಳದಿಂದ, ಬೇಸಿಗೆಯಲ್ಲಿ ಕಬ್ಬು ಮತ್ತು ಇತರೆ ಬೆಳೆಗಳನ್ನು ಬೆಳೆಯಲು  ಕೆರೆ ಅನುಕೂಲವಾಗಿದೆ.

ಈ ವರ್ಷದ ಅತಿಯಾದ ಮಳೆಗೆ ಕೆರೆ ತುಂಬಿ ತುಳುಕುತಿತ್ತು, ಕೆರೆಗೆ ಹೆಚ್ಚಾದ ನೀರು ಹರಿದು ಹೋಗಲು ಕೋಡಿಯ ನಿರ್ವಹಣೆ ಇಲ್ಲದ ಕಾರಣ ಕೆರೆ ಒಡ್ಡು ಒಡೆಯಲು ಕಾರಣ ಎಂಬುದು ರೈತರ ಅನಿಸಿಕೆಯಾಗಿದೆ. ಕೆರೆ ಬರಿದಾಗಿರುವ ಕಾರಣ ಈ ವರ್ಷ ಬೇಸಿಗೆಯಲ್ಲಿ ಜನುವಾರುಗಳ ಕುಡಿಯುವ ನೀರಿಗೆ ಮತ್ತು ಬಾವಿ, ಕೊಳವೆಬಾವಿಗಳ ಅಂತರ್‌ಜಲ ಕುಸಿಯುವ ಭೀತಿಯಲ್ಲಿದ್ದಾರೆ. ಒಡೆದು ಹೋಗಿರುವ ಕೆರೆಯ ಒಡ್ಡನ್ನು ಶೀಘ್ರವಾಗಿ ಸರಿಪಡಿಸುವಂತೆ, ಈ ಭಾಗದ ರೈತರಾದ ಗುರುನಾಥ ಮಾಳದೆ, ಮಲ್ಲಿನಾಥ ಕಾಮಶೆಟ್ಟಿ, ಸುಧಾಕರ ಫುಲಾರೆ, ಅಶೋಕ ಮೇತ್ರೆ, ಬಾಬು ಮಡಿವಾಳ, ಕಾಶಪ್ಪ ಮೇತ್ರೆ, ಗುರುನಾಥ ಮೆಹಕರೆ, ಸೂರ್ಯಕಾಂತ ಮಾಳದೆ, ನಾಗನಾಥ ಕಾಮಶೆಟ್ಟಿ ಮುಂತಾದವರು ಸಂಬಂಧಿಸಿದವರಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.