ADVERTISEMENT

ಕೊಠಡಿ ಕೊರತೆ ಭೀತಿಯಲ್ಲಿ ವಸತಿ ಶಾಲೆ!

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 10:40 IST
Last Updated 20 ಜೂನ್ 2013, 10:40 IST

ಹುಮನಾಬಾದ್: ಮಕ್ಕಳ ಸಂಖ್ಯೆ ವೃದ್ಧಿಯಾದ ಹಿನ್ನೆಲೆಯಲ್ಲಿ ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕೊಠಡಿಗಳ ಕೊರತೆ ಭೀತಿ ಎಸದಿರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

2008-09ನೆಯ ಸಾಲಿನಲ್ಲಿ ಆರಂಭಗೊಂಡ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟು 141ಜನ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ನಿಯಮ ಅನುಸಾರ ಬೋಧನೆ ಹಾಗೂ ವಸತಿ ಪ್ರಯುಕ್ತ ಪ್ರತ್ಯೆಕ ಕೋಣೆಗಳ ಸೌಕರ್ಯ ಇರಬೇಕು. ಆದರೇ ಸದ್ಯ ಸ್ಥಳೀಯ ಹಳೆಯ ತಹಸೀಲ್ದಾರ ಕಚೇರಿ ಕಟ್ಟಡದಲ್ಲಿ ಇರುವ  5ಕೋಣೆಗಳಲ್ಲಿ ಬಟ್ಟೆ, ಪೆಟ್ಟಿಗೆ ಮೊದಲಾದವುಗಳ ಮಧ್ಯದಲ್ಲೇ ಬೋಧನೆ ನಡೆಯುತ್ತಿದ್ದು, ಮಕ್ಕಳ ಓದಿಗೆ ತೊಂದರೆ ಆಗುತ್ತಿದೆ ಎಂದು ಪಾಲಕರು ದೂರುತ್ತಾರೆ.

ಹೊಸದಾಗಿ ಪ್ರವೇಶ: ಈ ವಸತಿ ಶಾಲೆಗೆ ಈ ಬಾರಿ ಹೊಸದಾಗಿ 50ಮಕ್ಕಳು ಪ್ರವೇಶ ಪಡೆದಿದ್ದಾರೆ. ಮೊದಲಿನ ಮಕ್ಕಳೇ ಅಗತ್ಯ ಸೌಕರ್ಯ ಕೊರತೆ ಎದುರಿಸುತ್ತಿರುವಾಗ ಹೊಸದಾಗಿ ಪ್ರವೇಶ ಪಡೆದವರ ಪರಿಸ್ಥಿತಿ ಏನಾದೀತು ಎಂಬ ಪ್ರಶ್ನೆ ಪಾಲಕರು ಹಾಗೂ ಪ್ರಜ್ಞಾವಂತ ನಾಗರೀಕರಿಂದ ಕೇಳಿ ಬರುತ್ತಿದೆ.

ಈ ಕುರಿತು ವಸತಿ ಶಾಲೆ ಪ್ರಾಚಾರ್ಯರನ್ನು ಸಂಪರ್ಕಿಸಿದಾಗ- 141ಮಕ್ಕಳ ನಿರ್ವಹಣೆ ಹೇಗೊ ಮಾಡಿಕೊಳ್ಳುತ್ತಿದ್ದೇವೆ. ಇವರೊಂದಿಗೆ ಹೊಸ ಮಕ್ಕಳ ನಿರ್ವಹಣೆ ಕಷ್ಟಸಾಧ್ಯ. ಸ್ವಂತ ಕಟ್ಟಡ ಹೊಂದಿದ ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸದ್ಯ ಖಾಲಿ ಇರುವ ಕಾರಣ ಈ ಮಕ್ಕಳಿಗೆ ಅಲ್ಲಿ ಅವಕಾಶ ಕಲ್ಪಿಸಿದಲ್ಲಿ ಸೂಕ್ತ ನಿರ್ವಹಣೆ ಸಾಧ್ಯ ಎಂದು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ವಸತಿ ಶಾಲೆ ಪ್ರಾಚಾರ್ಯ ಸಂತೋಷ ತಿವಾರಿ ಮಾಹಿತಿ ನೀಡಿದರು.

ಈ ಬಗ್ಗೆ ಕ್ಷೇತ್ರದ ಶಾಸಕರು ವಿಶೇಷ ಕಾಳಜಿ ವಹಿಸಿ, ಮಕ್ಕಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎನ್ನುವುದು ಪಾಲಕರ ಒತ್ತಾಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.