ಔರಾದ್: ತಾಲ್ಲೂಕಿನ ಕೌಡಗಾಂವ್ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ‘ಇಕೊ ಕ್ಲಬ್’ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಮಹತ್ವದ ಕೆಲಸ ಮಾಡುತ್ತಿದ್ದಾರೆ.
8ರಿಂದ 10ನೇ ತರಗತಿ ವರೆಗಿನ ಪ್ರೌಢ ಶಾಲೆಯಲ್ಲಿ 100 ವಿದ್ಯಾರ್ಥಿಗಳಿದ್ದು, ಪರಿಸರ ಜಾಗೃತಿ, ಶಾಲಾ ಸಂಸತ್ತು, ಯೋಗ ಮತ್ತು ಕರಾಟೆ ಶಿಬಿರಗಳನ್ನು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಇಕೊ ಕ್ಲಬ್ ಆರಂಭಿಸಿ ವಿದ್ಯಾರ್ಥಿಗಳಲ್ಲಿ ಮತ್ತು ಪಾಲಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಮುಖ್ಯ ಶಿಕ್ಷಕರು ಹೇಳುತ್ತಾರೆ.
ಪ್ರತಿವಾರ ಒಬ್ಬ ಸಂಪನ್ಮೂಲ ವ್ಯಕ್ತಿಯನ್ನು ಕರೆಸಿ, ನೈಸರ್ಗಿಕ ಸಂಪತ್ತಿನ ದುರ್ಬಳಕೆಯಿಂದ ಪರಿಸರದ ಮೇಲೆ ಆಗುವ ಪರಿಣಾಮ, ವಾತಾವರಣದಲ್ಲಿ ಹಸಿರು ಪ್ರಮಾಣ ಹೆಚ್ಚಿಸಲು ವಿದ್ಯಾರ್ಥಿ ಮತ್ತು ಸಮುದಾಯ ಸಹಭಾಗಿತ್ವ, ಸಸ್ಯ ಸಂಪತ್ತು, ನೀರು, ವಿದ್ಯುತ್ ಹಾಗೂ ಆಹಾರದ ಹಿತಮಿತ ಬಳಕೆ ಕುರಿತು ತಿಳಿಸಲಾಗುತ್ತದೆ.
ದಿನದಿಂದ ದಿನಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಹೆಚ್ಚಳ, ಬೇಡಿಕೆ ಇದೇ ರೀತಿ ಹೆಚ್ಚುತ್ತಾ ಹೋದರೆ ತೈಲ ಸಂಪತ್ತು ಬರಿದಾಗುವುದು, ಇದಕ್ಕಾಗಿ ಪರ್ಯಾಯ ಜೈವಿಕ ಇಂಧನದ ಉತ್ಪಾದನೆ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ. ರಾಷ್ಟ್ರೀಯ ಹಬ್ಬ, ಮಹಾತ್ಮರ ಜಯಂತಿ ವೇಳೆ ಗ್ರಾಮದಲ್ಲಿ ಜಾಥಾ, ನಾಟಕ ಮೂಲಕ ವಿದ್ಯಾರ್ಥಿಗಳೇ ಪಾಲಕರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸಲು ಮಕ್ಕಳ ಸಂಸತ್ತು ರಚಿಸಲಾಗಿದೆ. ಸ್ವಚ್ಛತೆ, ಆರೋಗ್ಯ, ಬಿಸಿಯೂಟ, ಪರಿಸರ ಸಂರಕ್ಷಣೆ ಜವಾಬ್ದಾರಿ ಒಬ್ಬೊಬ್ಬ ವಿದ್ಯಾರ್ಥಿಗೆ ವಹಿಸಿಕೊಡಲಾಗಿದೆ. ಅವರೆಲ್ಲ ತಮ್ಮ ತಮ್ಮ ಕೆಲಸ ಬಹಳ ನಿಷ್ಠೆಯಿಂದ ಮಾಡಿ ಇಡೀ ಶಾಲಾ ಪರಿಸರ ಬದಲಾಯಿಸಿದ್ದಾರೆ.
ಕಳೆದ ವರ್ಷ ಪ್ರಥಮ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಈ ಶಾಲೆ ವಿದ್ಯಾರ್ಥಿಗಳು ಶೇ 80 ರಷ್ಟು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ, ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಸಕಾಲ ನಾಟಕದಲ್ಲಿ ಉತ್ತಮ ಸಾಧನೆ ಮಾಡಿ ಬಹುಮಾನ ಪಡೆದಿದ್ದಾರೆ.
ಫಲಿತಾಂಶ ಹೆಚ್ಚಳ: ಪಠ್ಯೇತರ ಚಟುವಟಿಕೆ ಜೊತೆಗೆ ಶಿಕ್ಷಣ ಗುಣಮಟ್ಟ ಮತ್ತು ಫಲಿತಾಂಶ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳು ಹಾಕಿಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಪರೀಕ್ಷೆ ಎದುರಿಸುವ ವಿಧಾನಗಳು ಹೇಳಿಕೊಡಲಾಗುತ್ತಿದೆ. ಬೆಳಿಗ್ಗೆ ಮತ್ತು ರಾತ್ರಿ ವೇಳೆ ವಿಶೇಷ ತರಗತಿ ನಡೆಸಲಾಗುತ್ತಿದೆ.
ಕಟ್ಟಡ ಮಂಜೂರು: ಸದ್ಯ ಪ್ರಾಥಮಿಕ ಶಾಲಾ ಕಟ್ಟಡದಲ್ಲೇ ಪ್ರೌಢ ಶಾಲೆ ತರಗತಿಗಳು ನಡೆಯುತ್ತಿವೆ. ಗ್ರಾಮಸ್ಥರ ಹೋರಾಟ ಮತ್ತು ಶಿಕ್ಷಕರ ಪ್ರಯತ್ನದ ಫಲವಾಗಿ ಶಾಲಾ ಕಟ್ಟಡಕ್ಕಾಗಿ ಸರ್ಕಾರ 2 ಎಕರೆ ಜಮೀನು ನೀಡಿದೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಮಂಜೂರಾದ ₨60 ಲಕ್ಷ ಅನುದಾನದಿಂದ ಶಾಲಾ ಕಟ್ಟಡ ಕಾಮಗಾರಿ ಆರಂಭವಾಗಿರುವುದು ಹೋರಾಟಕ್ಕೆ ಸಂದ ಫಲವಾಗಿದೆ.
‘ವಿದ್ಯಾರ್ಥಿಗಳಿಗೆ ನೆರವು’
‘3 ವರ್ಷದ ಹಿಂದೆ ಸರ್ಕಾರ ಕೌಡಗಾಂವ್ ಗ್ರಾಮಕ್ಕೆ ಹೊಸದಾಗಿ ಪ್ರೌಢ ಶಾಲೆ ಮಂಜೂರು ಮಾಡಿದೆ. ಶಿಕ್ಷಕರ ನೆರವಿನಿಂದ ಮಕ್ಕಳ ಸಮಗ್ರ ಬೆಳವಣಿಗೆ ನೆರವಾಗುವ ಅನೇಕ ಕಾರ್ಯಕ್ರಮ ಹಾಕಿಕೊಂಡಿದ್ದೇವೆ.’
–ಸಂತೋಷ ಪೂಜಾರಿ,
ಮುಖ್ಯ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.