ADVERTISEMENT

ಖಾಸಗಿ ವಾಹನಗಳ ತಾಣ ಎಪಿಎಂಸಿ ಪ್ರಾಂಗಣ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 9:15 IST
Last Updated 21 ಜುಲೈ 2012, 9:15 IST

ಹುಮನಾಬಾದ್: ಪ್ರಾಂಗಣ ಬಿಡಿಭಾಗ ಯಾವುದೇ ಪ್ರದೇಶದಲ್ಲಿ ಕಣ್ಣು ಹರಿಸಿದರೂ ಕ್ರೂಸರಗಳದ್ದೇ ದರ್ಬಾರ್ ! ಪ್ರತಿ ದಿನ ಸಂಜೆ ಒಂದೊಮ್ಮೆ ಕಣ್ಣು ಹರಿಸಿದರೆ ಖಾಸಗಿ ಬಸ್‌ಗಳ ದರ್ಬಾರ. ಇನ್ನೊಂದೆಡೆ ಸದಾ ದುರುಸ್ತಿಗೊಳ್ಳುವ ಭಾರಿ ವಾಹನಗಳು. ಒಂದೇ ಒಂದು ಬಾರಿ ಕಣ್ಣು ಹರಿಸಿದರೂ ಸಾಕು ಇದು ಪಕ್ಕಾ ಖಾಸಗಿ ವಾಹನಗಳ ತಂಗುದಾಣ ಎಂದೇ ಭಾಸವಾಗುತ್ತದೆ. ಹಾಗಾದರೆ ಆ ಸ್ಥಳ ಆದರೂ ಯಾವುದು? ಯಾರು ಅದರ ನಿರ್ವಹಣೆ ಮಾಡುತ್ತಾರೆ? ಎಂಬ ಇತ್ಯಾದಿ ಪ್ರಶ್ನೆಗಳು ಪ್ರತಿಯೊಬ್ಬರಲ್ಲೂ ಮೂಡುತ್ತವೆ. ಆ ಕುರಿತು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಇಲ್ಲಿದೆ ಅದಕ್ಕೆ ಉತ್ತರ- ಇದೂ ಪಕ್ಕಾ ಹುಮನಾಬಾದ್ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೇರಿದ ಪ್ರಾಂಗಣ.

ಇಲ್ಲಿ ಎಲ್ಲವೂ ಸರ್ಕಾರ ನಿಯಮ ಅನುಸಾರ ನಡೆಯುತ್ತಿಲ್ಲ ಎನ್ನುವುದು ಸಾರ್ವಜನಿಕ ಗಂಭೀರ ಆರೋಪ. ಅಂದರೆ ಪ್ರತಿ ಇಲಾಖೆಗೂ ಇರುವ ಹಾಗೆ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗೂ ಕೂಡ ತನ್ನದೇ ಆದ ಹಲವು  ನಿಯಮಗಳಿವೆ. ಈ ಪ್ರಾಂಗಣದಲ್ಲಿ ನಡೆಯುವ ಎಲ್ಲ ವ್ಯವಹಾರ ಕೃಷಿ ಉತ್ಪನ್ನಕ್ಕೆ ಸಂಬಂಧಪಟ್ಟಿರಬೇಕು. ಅಂದರೇ ಇಲ್ಲಿ ಆ ವ್ಯವಹಾರವೇ ನಡೆಯುತ್ತಿಲ್ಲ ಎಂದು ಖಂಡಿತಾ ತಿಳಿದುಕೊಳ್ಳಬೇಕಾಗಿಲ್ಲ. ಇರುವ ಅಂಗಡಿಗಳ ಪೈಕಿ ಶೇ. 25ಕ್ಕೂ ಅಧಿಕ ಅಂಗಡಿಗಳಲ್ಲಿ ಕೃಷಿಯೇತರ ವ್ಯವಹಾರಗಳೇ ನಡೆಯುತ್ತವೆ. ಹಾಗಾದರೇ ಇದೆಲ್ಲವೂ ಗೊತ್ತಿದ್ದರೂ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲವೇ ? ಎಂಬ ಪ್ರಶ್ನೆನಾ ಹಾಗಾದ್ರೆ ಮುಂದೆ ನೋಡಿ- ನಿವೆಲ್ಲ ತಿಳಿದುಕೊಂಡಂತೆ ಇವರು ಖಂಡಿತಾ ಸುಮ್ಮನೆ ಕುಳಿತಿಲ್ಲ. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನಿರಂತರ ಸೂಚನೆ ನೀಡುತ್ತಲೇ ಇದ್ದಾರೆ.
ಆದರೆ ಸೂಚನೆ ನೀಡಲಾದ ಪೈಕಿ ಶೇ. 5ರಷ್ಟು ಅಂಗಡಿಗಳು ಮಾತ್ರ ಖಾಲಿ ಆಗಿವೆ ಎನ್ನುವುದು ಮಂದಿಯ  ಆರೋಪ.

ಇನ್ನೂ ಖಾಸಗಿ ವಾಹನಗಳು ನಿಲ್ಲುವ ಕುರಿತು ಕೇಳಲಾದ ಪ್ರಶ್ನೆಗೆ ಸಾರ್ವಜನಿಕರು ಮತ್ತು ಖಾಸಗಿ ವಾಹನಗಳ ಮಾಲಿಕ ಮತ್ತು ಚಾಲಕರಿಂದ ಬಂದ ಉತ್ತರ ಇದು- ಸುಮ್ಮನೆ ಯಾರೂ ತಮಗೆ ಸೇರಿದ ಸ್ಥಳದಲ್ಲಿ
ವಾಹನಗಳಿಗೆ ನಿಲುಗಡೆಗೆ ಸ್ಥಳ ನೀಡುವುದಿಲ್ಲ. ಈ ರೀತಿ ನಿಲ್ಲಿಸುವ ವಾಹನಗಳಿಂದ ಸಂಬಂಧಪಟ್ಟವರಿಗೆ ಪ್ರತಿ ತಿಂಗಳು ಇಂತಿಷ್ಟು ಹಣ ಬಾಡಿಗೆ ರೂಪದಲ್ಲಿ ಹೋಗುತ್ತದೆ ಎನ್ನುವುದು ಹೆಸರು ಹೇಳಲಿಚ್ಛಿಸದ ವ್ಯಕ್ತಿಗಳ ಗಂಭೀರ ಆರೋಪ. ಇನ್ನೂ ಕುರಿತು ಹಲವು ಬಾರಿ ಕೇಳಲಾದ ಪ್ರಶ್ನೆಗೆ- ಸದ್ಯ ಅಧಿಕಾರದಲ್ಲಿ ಇರುವ ಮತ್ತು ಅಧಿಕಾರ ಅನುಭವ ಹೊಂದಿರುವವರು ಈ ರೀತಿ ಹೇಳುತ್ತಾರಂತೆ - ನಿಯಮ ಬಾಹಿರ ಅಂಗಡಿ ನಡೆಯುತ್ತಿರುವುದು
ಹುಮನಾಬಾದ್ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರದೇಶದಲ್ಲಿ ಮಾತ್ರ ಅಲ್ಲ. ಇಡೀ ಜಿಲ್ಲೆಯ ಎಲ್ಲ ಎ.ಪಿ.ಎಂ.ಸಿಗಳ ಕಥೆಯೂ ಆಗಿದೆ. ಆದರೆ ಅಧಿಕಾರಿಗಳು ಕೇವಲ ಹುಮನಾಬಾದ್ ಎ.ಪಿ.ಎಂ.ಸಿ ಮೇಲೆ ಮಾತ್ರ ಈ ರೀತಿ ಒತ್ತಡ ಹೇರುವುದು ಯಾವ ನ್ಯಾಯ ? ಮಾಡುವುದಾದರೇ ಸರ್ಕಾರ ಬೀದರ್ ಜಿಲ್ಲೆಯ ಎಲ್ಲ ಎ.ಪಿ.ಎಂ.ಸಿಗಳಿಗೂ ಏಕರೂಪ ನಿಯಮ ಜಾರಿ ಮಾಡಲಿ ಎನ್ನುತ್ತಾರಂತೆ.  ಇಲಾಖೆ ಅಧಿಕಾರಿ ಹಾಗೂ ಆಡಳಿತ ಮಂಡಳಿಯವರು ಬಾಡಿಗೆ ರೂಪದಲ್ಲಿ ಹಣ ಪಡೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೇ ಈ ರೀತಿ ವಾಹನ ನಿಲ್ಲಿಸುತ್ತಿರುವುದಕ್ಕೆ ಯಾರು ಹೊಣೆ ಎಂಬ ಇತ್ಯಾದಿಗಳ ಕುರಿತು ಮೇಲಾಧಿಕಾರಿಗಳು ಪರಿಶೀಲಿಸಿ, ಕ್ರಮ ಜರುಗಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.