ADVERTISEMENT

ಗುಲ್ಬರ್ಗ ಹೈ. ಪೀಠಕ್ಕೆ ಬಳ್ಳಾರಿ, ಕೊಪ್ಪಳ ಸೇರ್ಪಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:40 IST
Last Updated 2 ಅಕ್ಟೋಬರ್ 2012, 4:40 IST

3ರಂದು 4 ಜಿಲ್ಲೆಗಳಲ್ಲಿ ಕೋರ್ಟ್ ಕಲಾಪ ಬಹಿಷ್ಕಾರ
ಗುಲ್ಬರ್ಗ:
ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ನ್ಯಾಯದಾನ ದೃಷ್ಟಿಯಿಂದಲೂ ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠದ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಇದೇ 3ರಂದು ಕೋರ್ಟ್ ಕಲಾಪ ಬಹಿಷ್ಕರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ನಾಲ್ಕು ಜಿಲ್ಲೆಗಳ ವಕೀಲರ ಸಂಘಗಳು ತೀರ್ಮಾನಿಸಿವೆ.

ಇವೆರಡು ಜಿಲ್ಲೆಗಳು ಹೈದರಾಬಾದ್ ಕರ್ನಾಟಕ ಪ್ರದೇಶದ ಅನುದಾನಕ್ಕಾಗಿ ಹಾಗೂ ಕಂದಾಯ ವಿಭಾಗವೆಂದು ಆಡಳಿತಾತ್ಮಕವಾಗಿ ಗುಲ್ಬರ್ಗದೊಂದಿಗೆ ಗುರುತಿಸಿಕೊಳ್ಳುತ್ತಿವೆ. ಯಾದಗಿರಿ, ಗುಲ್ಬರ್ಗ, ಬೀದರ್, ರಾಯಚೂರು ಜಿಲ್ಲೆಗಳ ವಕೀಲರ ಸಂಘಗಳು ಈ ಬಗ್ಗೆ ಒಮ್ಮತ ಅಭಿಪ್ರಾಯ ಹೊಂದಿದ್ದು, ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಸುವುದಾಗಿ ಗುಲ್ಬರ್ಗ ವಕೀಲರ ಸಂಘದ ಹೈಕೋರ್ಟ್ ಘಟಕದ ಅಧ್ಯಕ್ಷ ಬಿ. ಹನಮಂತ ರೆಡ್ಡಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ನಿಲುವು `ಕಷ್ಟಕ್ಕೆ ಕರೆಯಬೇಡಿ ಊಟಕ್ಕೆ ಮರೆಯಬೇಡಿ~ ಎನ್ನುವಂತಾಗಿದೆ. ಹೈಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಎಡಿಬಿ) ಮತ್ತು ಕಾರ್ಮಿಕ ವ್ಯಾಜ್ಯ ಪರಿಹಾರಕ್ಕಾಗಿ ಈಗಾಗಲೇ ಈ ಎರಡು ಜಿಲ್ಲೆಗಳ ಜನರು ಗುಲ್ಬರ್ಗಕ್ಕೆ ಬರುತ್ತಿದ್ದಾರೆ. ಹೀಗಾಗಿ ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಕ್ಕೆ ಸೇರ್ಪಡೆಯಾಗುವುದರಿಂದ ಅಲ್ಲಿನ ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

3ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಕೋರ್ಟ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಬಳ್ಳಾರಿ, ಕೊಪ್ಪಳ ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರಹೋರಾಟ ನಡೆಸುವುದರೊಂದಿಗೆ, ಈ ಭಾಗದ ಜನಸಾಮಾನ್ಯರೆಲ್ಲ ಹೋರಾಟಕ್ಕೆ ಧುಮುಕುವ ಪರಿಸ್ಥಿತಿ ಉದ್ಭವವಾಗಬಹುದು ಎಂದು ಹೇಳಿದರು.

ಧಾರವಾಡ ಹೈಕೋರ್ಟ್ ಪೀಠಕ್ಕೆ ಎಂಟು ಜಿಲ್ಲೆಗಳು ಹಾಗೂ ಗುಲ್ಬರ್ಗ ಹೈಕೋರ್ಟ್ ಪೀಠಕ್ಕೆ ನಾಲ್ಕು ಜಿಲ್ಲೆಗಳನ್ನು ಸೇರ್ಪಡೆಗೊಳಿಸಲು ಆರಂಭದಲ್ಲೆ ಸಚಿವ ಸಂಪುಟ ಕೈಗೊಂಡಿದ್ದ ತೀರ್ಮಾನವು ದೋಷಪೂರಿತವಾಗಿದೆ. ಈ ತೀರ್ಮಾನದ ವಿರುದ್ಧ ಸುಪ್ರೀಂಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲು ಪರಿಶೀಲಿಸಲಾಗುತ್ತಿದೆ ಎಂದರು.

ರಾಜ್ಯ ವಕೀಲರ ಸಂಘದ ಉಪಾಧ್ಯಕ್ಷ ಕಾಶಿನಾಥ ಮೊತಕಪಲ್ಲಿ, ಕೇಂದ್ರೀಯ ರೈಲ್ವೆ ಮಂಡಳಿ ಸದಸ್ಯ ಎಂ.ಎನ್. ಪಾಟೀಲ, ಗುಲ್ಬರ್ಗ ವಕೀಲರ ಸಂಘದ ಉಪಾಧ್ಯಕ್ಷ ಬಸವರಾಜ ಯಾಲಕ್ಕಿ, ಚಂದ್ರಕಾಂತ ಆರ್. ಕಾಳಗಿ, ಹೃಷಿಕೇಶ ದೇಶಮುಖ, ಎ.ಬಿ. ಪಾಟೀಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.ಚ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.