ಬೀದರ್: ನಗರದ ಮಾಧವನಗರದಲ್ಲಿ ಇರುವ ಜನಸೇವಾ ಶಿಶುಮಂದಿರ ಮತ್ತು ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಮಾಧವನಗರ, ಪ್ರತಾಪನಗರ ಬಡಾವಣೆಯ ಶಾಲೆಯ ಮಕ್ಕಳು ಕೃಷ್ಣ ಹಾಗೂ ರಾಧೆ ಅವರ ವೇಷಧಾರಿಗಳಾಗಿ ಶೋಭಾಯಾತ್ರೆ ನಡೆಸಿದರು.
ಶೋಭಾಯಾತ್ರೆಯಲ್ಲಿ ಗಂಡು ಮಕ್ಕಳು ಕೈಯಲ್ಲಿ ಕೋಲು, ತಲೆಯ ಮೇಲೆ ಕೀರಿಟ ಹಾಕಿಕೊಂಡು ಕೃಷ್ಣನ ಪಾತ್ರ ವಹಿಸಿದ್ದರೆ, ಹೆಣ್ಣು ಮಕ್ಕಳು ರಾಧೆ ಪಾತ್ರ ಧರಿಸಿಕೊಂಡು ಎಲ್ಲರ ಗಮನ ಸೆಳೆದರು.
ಬಡಾವಣೆಯ ಹನುಮಾನ ದೇವಸ್ಥಾನದಲ್ಲಿ ಮಹಿಳೆಯರಿಂದ ಕೃಷ್ಣನ ತೋಟಿಲು ಹಾಕಿ ಕಾರ್ಯಕ್ರಮ ನಡೆಸಲಾಯಿತು. ತಾಯಿಯರು ಜೋಗುಳ ಪದಗಳನ್ನು ಹಾಡಿದರು. ನಂತರ ಮಕ್ಕಳು ಮೊಸರಿನ ಗಡಗಿ ಒಡೆದು, ಬೆಣ್ಣೆ ತಿಂದು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಚಿತವಾಗಿ ಪೆನ್ಸಿಲ್, ನೋಟ್‌ಬುಕ್ ವಿತರಿಸಲಾಯಿತು.
ನಂತರ ಶಾರದಾ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಸುಬ್ರಮಣ್ಯಪ್ರಭು ಅವರು, ಕೃಷ್ಣ ಜನ್ಮಾಷ್ಠಮಿ ಕುರಿತು ಉಪನ್ಯಾಸ ನೀಡಿದರು. ಜನ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ಧಪ್ಪ ಜಲಾದೆ ಅಧಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ರವಿಸ್ವಾಮಿ, ಮುಖ್ಯಗುರು ಭವ್ಯಾ, ಶಿಕ್ಷಕಿಯರಾದ ನೀಲಮ್ಮ, ವೈಶಾಲಿ, ಮೀನಾಕ್ಷಿ ಉಪಸ್ಥಿತರಿದ್ದರು.
`ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಾಲು, ಮೊಸರು~
`ಮಕ್ಕಳ ಆರೋಗ್ಯ ಉತ್ತಮ ರೀತಿಯಿಂದ ಕೂಡಿರಲು ಅವರಿಗೆ ಹಾಲು, ಮೊಸರು ಹೆಚ್ಚಿನದಾಗಿ ಒದಗಿಸಬೇಕು~ ಎಂದು ಎಂದು ಡಾ. ನರಸಪ್ಪ ಅಭಿಪ್ರಾಯಪಟ್ಟರು.
ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೃಷ್ಣಾನುಭವ ಪ್ರತಿಷ್ಠಾನ ನಗರದ ಸಿದ್ಧಿ ವಿನಾಯಕ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾಲು ಸೇವನೆಯಿಂದ ಆರೋಗ್ಯಕ್ಕೆ ಪೂರಕವಾದ `ಎ~ ಮತ್ತು `ಬಿ~ ವಿಟಮಿನ್ ಸಿಗುತ್ತದೆ ಎಂದು ವಿವರಿಸಿದರು. ತತ್ವಪದಕಾರ ರಘುನಾಥ ಹಡಪದ ಮಾತನಾಡಿದರು. ಓಂಪ್ರಕಾಶ ಧಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಚಾರ್ಯ ಪ್ರಶಾಂತ ಬಿರಾದಾರ್, ಪ್ರಮುಖರಾದ ಸಿದ್ರಾಮಪ್ಪ ಕಪಲಾಪುರೆ, ರಮೇಶ ಬಿರಾದಾರ್, ಪ್ರಕಾಶ ಪಾಟೀಲ್, ರವೀಂದ್ರಸಿಂಗ್ ಠಾಕೂರ್, ನಾಗಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.