ADVERTISEMENT

ಗೋ ಆಧಾರಿತ ಕೃಷಿಗೆ ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 7:15 IST
Last Updated 25 ಡಿಸೆಂಬರ್ 2017, 7:15 IST
ಪ್ರಥಮ ಜಿಲ್ಲಾ ಸಾವಯವ ಕೃಷಿ ಸಮ್ಮೇಳನ ಮತ್ತು ಸಿರಿಧಾನ್ಯ ಮೇಳ ಪ್ರಯುಕ್ತ ಬೀದರ್‌ನಲ್ಲಿ ಭಾನುವಾರ ನಡೆದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಸಲಹಾ ಸಮಿತಿ ಸದಸ್ಯ ಸೂರಜ್‌ಸಿಂಗ್‌ ರಾಜಪೂತ ಮಾತನಾಡಿದರು
ಪ್ರಥಮ ಜಿಲ್ಲಾ ಸಾವಯವ ಕೃಷಿ ಸಮ್ಮೇಳನ ಮತ್ತು ಸಿರಿಧಾನ್ಯ ಮೇಳ ಪ್ರಯುಕ್ತ ಬೀದರ್‌ನಲ್ಲಿ ಭಾನುವಾರ ನಡೆದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಸಲಹಾ ಸಮಿತಿ ಸದಸ್ಯ ಸೂರಜ್‌ಸಿಂಗ್‌ ರಾಜಪೂತ ಮಾತನಾಡಿದರು   

ಬೀದರ್: ‘ಗೋ ಆಧಾರಿತ ನೈಸರ್ಗಿಕ ಕೃಷಿ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ನಿರಂತರವಾಗಿ ನಡೆದಾಗ ಮಾತ್ರ ಕೃಷಿಕರಿಗೆ ರಾಸಾಯನಿಕ ಮುಕ್ತ ಕೃಷಿ ಚಟುವಟಿಕೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳಲು ಸಾಧ್ಯ’ ಎಂದು ಕೇಂದ್ರ ಸರ್ಕಾರದ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ಸಲಹಾ ಸಮಿತಿ ಸದಸ್ಯ ಸೂರಜ್‌ಸಿಂಗ್‌ ರಾಜಪೂತ ಅಭಿಪ್ರಾಯಪಟ್ಟರು.

ನಗರದ ಸಾಯಿ ಆದರ್ಶ ಸ್ಕೂಲ್‌ ಆವರಣದಲ್ಲಿ ಆಯೋಜಿಸಿದ್ದ ಪ್ರಥಮ ಜಿಲ್ಲಾ ಸಾವಯವ ಕೃಷಿ ಸಮ್ಮೇಳನ ಮತ್ತು ಸಿರಿಧಾನ್ಯ ಮೇಳದ ಅಂಗವಾಗಿ ಭಾನುವಾರ ನಡೆದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಪ್ರತಿಯೊಬ್ಬ ಸಾವಯವ ಕೃಷಿಕರು ಕಡ್ಡಾಯವಾಗಿ ಗೋ ಆಧಾರಿತ ಕೃಷಿ ಕೈಗೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

‘ಭಾರತ ಸನಾತನ ದೇಶ. ಗೋ ಸೇವೆ ಮಾಡುವುದೇ ನಮ್ಮ ದೇಶದ ಪರಂಪರೆಯಾಗಿದೆ. ಗೋ ಆಧಾರಿತ ಕೃಷಿ ಬೇಸಾಯವೇ ನಮ್ಮ ಉಸಿರಾಗಬೇಕು. ಆಕಳ ಹಾಲಿನಲ್ಲಿ ಔಷಧಿ ಗುಣ ಇದೆ. ದೀರ್ಘಕಾಲದ ಕಾಯಿಲೆಗಳು, ಕ್ಯಾನ್ಸರ್‌, ಚರ್ಮರೋಗಗಳಂತಹ ಕಾಯಿಲೆಗಳಿಗೆ ಆಕಳ ಹಾಲು ಔಷಧಿ ರೂಪದಲ್ಲಿ ಬಳಕೆಯಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ ಪ್ರತಾಪ ಅವರು ಗೋ ಸೇವೆ ಮಾಡಿದ್ದರಿಂದಲೇ ಚಕ್ರವರ್ತಿಗಳಾಗಿ ಹೊರಹೊಮ್ಮಿದ್ದರು. ದೊಡ್ಡ ವಿಜ್ಞಾನಿಗಳೂ ಕೂಡ ಒಂದಲ್ಲೊಂದು ರೀತಿಯಲ್ಲಿ ಗೋ ಆಧಾರಿತ ಆಹಾರ ಸೇವನೆ ಮಾಡುತ್ತಾರೆ. ಆದ್ದರಿಂದ ಇಂದಿನ ಮಕ್ಕಳಿಗೆ ಹಸುವಿನ ಮಹತ್ವ ತಿಳಿಸುವ ಅಗತ್ಯವಿದೆ. ಅಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕಾಗಿ ಹಸುವಿನ ಹಾಲು ಸೇವಿಸುವಂತೆ ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.

‘ಸಾವಯವ ಕೃಷಿ ಪದ್ಧತಿಯ ಮಹತ್ವ ಕುರಿತು ಕೃಷಿ ಇಲಾಖೆ ವತಿಯಿಂದ ವಿಡಿಯೊ ಸಿದ್ಧಪಡಿಸಿ ಅದರ ಮೂಲಕ ಕೃಷಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಸಬೇಕು. ಅಂದಾಗ ಮಾತ್ರ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಲು ಮುಂದೆ ಬರುತ್ತಾರೆ’ ಎಂದು ಸಮ್ಮೇಳನ ಅಧ್ಯಕ್ಷ ರಾಜೇಶ್ವರ ಶಿವಾಚಾರ್ಯ ತಿಳಿಸಿದರು.

‘ಭೂಮಿಯಲ್ಲಿ ದುಡಿಯುವ ಹಾಗೂ ಹಸುಗಳನ್ನು ಸಾಕುವವರು ನಿಜವಾದ ರೈತರು’ ಎಂದರು. ಜಾನಪದ ಪರಿಷತ್ ಬಸವಕಲ್ಯಾಣ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ, ಹುಮನಾಬಾದ್‌ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣಪೇಟಕರ್‌ ಮಾತನಾಡಿದರು.

ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ ಹಕ್, ಪ್ರಗತಿಪರ ರೈತ ಸುರೇಶಗೌಡ ಪಾಟೀಲ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ದಯಾನಂದ ಸ್ವಾಮಿ, ಉಪಾಧ್ಯಕ್ಷ ವೈಜನಾಥ ನೌಬಾದೆ, ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ರಾಜಕುಮಾರ ಹೆಬ್ಬಾಳೆ, ಕೋಂಡಿಬಾರಾವ್‌ ಪಾಂಡ್ರೆ ಇದ್ದರು. ಬಸಯ್ಯ ಸ್ವಾಮಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಸಿದ್ದಪ್ಪ ಫುಲಾರಿ ವಂದಿಸಿದರು.

* * 

ಬಹುತೇಕ ರೈತರು ಶ್ರಮ ಸಂಸ್ಕೃತಿಯನ್ನೇ ಮರೆತು ಪರಾವಲಂಬಿಯಾಗುತ್ತಿರುವುದು ವಿಷಾದಕರ ಸಂಗತಿ. ಕೃಷಿಕರು ಭೂಮಿಯಲ್ಲಿ ದುಡಿಯುವ ಮೂಲಕ ಸ್ವಾವಲಂಬಿಗಳಾಗಬೇಕು.
ರಾಜೇಶ್ವರ ಶಿವಾಚಾರ್ಯ ಸಮ್ಮೇಳನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.