ADVERTISEMENT

ಗೌರ ಗ್ರಾಮದಲ್ಲಿ ಮೂಲಸೌಕರ್ಯ ಗೌಣ

ಮಾಣಿಕ ಆರ್ ಭುರೆ
Published 10 ಅಕ್ಟೋಬರ್ 2017, 5:29 IST
Last Updated 10 ಅಕ್ಟೋಬರ್ 2017, 5:29 IST

ಬಸವಕಲ್ಯಾಣ: ತಾಲ್ಲೂಕಿನ ಗೌರ ಗ್ರಾಮದ ಎಲ್ಲ ಓಣಿಗಳಲ್ಲಿ ರಸ್ತೆಯ ಮೇಲೆಯೇ ನೀರು ಹರಿದಾಡುವುದರಿಂದ ಎಲ್ಲೆಡೆ ಅಸ್ವಚ್ಛತೆಯಿದೆ. ಸೊಳ್ಳೆ ಕಾಟ ಹೆಚ್ಚಿದ್ದರಿಂದ ಮನೆಗಳ ಬಾಗಿಲುಗಳನ್ನು ಸದಾ ಮುಚ್ಚಿಕೊಂಡು ಇರಬೇಕಾದ ಪರಿಸ್ಥಿತಿ ಉಂಟಾಗಿದೆ.

ಬೆಟಬಾಲ್ಕುಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಗ್ರಾಮವಿದೆ. ಇಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿದೆ. ಆದರೆ, ಸಂಬಂಧಿತರು ಗ್ರಾಮಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ ತೋರಿರುವುದು ಇಲ್ಲಿನ ಅವ್ಯವಸ್ಥೆಯನ್ನು ಕಂಡಾಗ ಗೊತ್ತಾಗುತ್ತದೆ.

ಕೆಲ ಓಣಿಗಳಲ್ಲಿ ಕಾಂಕ್ರಿಟ್‌  ರಸ್ತೆಗಳಿದ್ದರೂ ಹಾಳಾಗಿ ತಗ್ಗುಗುಂಡಿಗಳು ಬಿದ್ದಿವೆ. ಉಳಿದೆಡೆ ಕಚ್ಚಾ ರಸ್ತೆಗಳಿದ್ದು ಅಲ್ಲಿನ ಮಣ್ಣಿನಲ್ಲಿ ನೀರು ಹರಡಿ ಕೆಸರು ಆಗಿದೆ. ಬಹಳಷ್ಟು ಕಡೆಗಳಲ್ಲಿ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿಲ್ಲ.

ADVERTISEMENT

ಹೀಗಾಗಿ ಯಾವ ರಸ್ತೆಗೆ ಹೋದರೂ ಅಲ್ಲಿ ನೀರು ಹರಡಿರುವುದು ಕಾಣುತ್ತದೆ. ಒಂದೆರಡು ರಸ್ತೆಗಳ ಪಕ್ಕದಲ್ಲಿ ಚರಂಡಿ ಇದ್ದರೂ ನಿಯಮಿತವಾಗಿ ಅದರ ಸ್ವಚ್ಛತೆ ನಡೆಸದೆ ನೀರು ಸಂಗ್ರಹಗೊಂಡಿದೆ. ಅದರಲ್ಲಿ ಕಸಕಡ್ಡಿ, ಮಣ್ಣು ತುಂಬಿಕೊಂಡಿದ್ದು ನೀರು ಪಾಚಿಗಟ್ಟಿದಂತಾಗಿ ದುರ್ವಾಸನೆ ಬರುತ್ತಿದೆ. ಹಾಗಾಗಿ ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತಿದೆ.

`ಇಲ್ಲಿನ ಭೀಮನಗರ ಅಂಗನವಾಡಿ ಕೇಂದ್ರದ ಎದುರಿನ ರಸ್ತೆಯು ತಗ್ಗು ಪ್ರದೇಶದಲ್ಲಿರುವ ಕಾರಣ ಊರಲ್ಲಿನ ಎಲ್ಲ ಓಣಿಗಳ ನೀರು ಇಲ್ಲಿಗೆ ಹರಿದು ಬಂದು ಸಂಗ್ರಹಗೊಳ್ಳುತ್ತಿದೆ. ಮನೆಗಳಿಂದ ಹೊರಗೆ ಬರಬೇಕಾದರೆ ಇಂಥ ಅವ್ಯವಸ್ಥೆಯ ದರ್ಶನ ಆಗುತ್ತಿದೆ. ನೀರು ಇಲ್ಲಿಂದ ಮುಂದಕ್ಕೆ ಸಾಗಲು ವ್ಯವಸ್ಥೆ ಕೈಗೊಳ್ಳಬೇಕು ಎಂದು ಪಂಚಾಯಿತಿಯವರಿಗೆ ಅನೇಕ ಸಲ ವಿನಂತಿಸಿದರೂ ಕ್ರಮ ತೆಗೆದುಕೊಂಡಿಲ್ಲ’ ಎಂದು ಶಿವಪುತ್ರಪ್ಪ ಗೋಳು ತೋಡಿಕೊಂಡಿದ್ದಾರೆ.

`ಪ್ರತಿ ಓಣಿಯ ಸ್ಥಿತಿಯೂ ಇದೆ ಆಗಿದೆ. ಈ ಕಾರಣ ಸೊಳ್ಳೆ ಕಾಟ ಹೆಚ್ಚಿದ್ದು ನಾನಾ ರೋಗಗಳಿಂದ ಜನರು ಬಳಲುತ್ತಿದ್ದಾರೆ. ಇಂಥ ಪರಿಸ್ಥಿತಿಯನ್ನು ಕಂಡು ನೆಂಟರು, ಆಪ್ತರು ಊರಿಗೆ ಬರಲು ಹಿಂಜರಿಯುತ್ತಿದ್ದಾರೆ. ಮಹಿಳೆಯರಿಗಾಗಿ ಸಾಮೂಹಿಕ ಶೌಚಾಲಯ ನಿರ್ಮಿಸಬೇಕು’ ಎಂದು ಸಂಗೀತಾಬಾಯಿ ಆಗ್ರಹಿಸಿದರು.

`ಇಲ್ಲಿಂದ ಬಸವಕಲ್ಯಾಣ ಮತ್ತು ವ್ಯಾಪಾರ ಸ್ಥಳವಾದ ಲಾತೂರ್‌ಗೆ ಹೋಗುವ ರಸ್ತೆ ಹದಗೆಟ್ಟಿದೆ. ಅಲ್ಲಲ್ಲಿ ತಗ್ಗುಗುಂಡಿಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡೆತಡೆ ಆಗುತ್ತಿದೆ. ಆದ್ದರಿಂದ ಡಾಂಬರೀಕರಣ ಕೈಗೊಳ್ಳಬೇಕು’ ಎಂದು ಶಿವಕುಮಾರ ಮೇತ್ರೆ ಒತ್ತಾಯಿಸಿದ್ದಾರೆ.

‘ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಕೆಲ ಕೋಣೆಗಳು ಶಿಥಿಲಗೊಂಡಿದ್ದು ಅವುಗಳಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಅವುಗಳನ್ನು ನೆಲಸಮಗೊಳಿಸಬೇಕು. ಹಳೆಯ ಕೊಠಡಿಗಳಲ್ಲಿ ಕಸಕಡ್ಡಿ ತುಂಬಿಕೊಂಡಿದ್ದು ಹಂದಿ ನಾಯಿ ಅಲ್ಲಿ ವಾಸಿಸುವಂತಾಗಿದೆ. ಮಕ್ಕಳು ಅಲ್ಲಿಯೇ ಆಟವಾಡುತ್ತಾರೆ. ಆದ್ದರಿಂದ ಅವುಗಳ ಸ್ವಚ್ಛತೆಯನ್ನಾದರೂ ಶೀಘ್ರದಲ್ಲಿ ಕೈಗೊಳ್ಳಬೇಕು’ ಎಂದು ಪಾಲಕ ಕಾಶಿನಾಥ ಕೇಳಿಕೊಂಡಿದ್ದಾರೆ. `ಗ್ರಾಮದಲ್ಲಿ ಚರಂಡಿ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.