ADVERTISEMENT

ಚಿಂತನೆ ಸುಂದರ ಸಮಾಜಕ್ಕೆ ಅಡಿಪಾಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2011, 5:40 IST
Last Updated 3 ಏಪ್ರಿಲ್ 2011, 5:40 IST

ಬೀದರ್: ಚಿಂತನೆ ಸುಸಂಸ್ಕೃತ ಸಮಾಜಕ್ಕೆ ಅಡಿಪಾಯ ಆಗಬಲ್ಲುದು ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ನುಡಿದರು.ಶರಣ ಸಂಸ್ಕೃತಿ ಅಂಗವಾಗಿ ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಎರಡನೇ ದಿನ ಸಹಜ ಶಿವಯೋಗದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಹಿಂದೆ 770 ಅಮರಗಣಂಗಳು ಚಿಂತನ- ಮಂಥನ ನಡೆಸಿದ್ದರಿಂದಲೇ ಅಮೂಲ್ಯವಾದ ವಚನ ಸಾಹಿತ್ಯ ಹೊರ ಬರುವಂತಾಯಿತು ಎಂದು ಹೇಳಿದರು.
 

ಓಡಾಟದ ಬದುಕಿನ ಏಳು- ಬೀಳು ಸಹಜ. ಆದರೆ, ಸಹಜವಾದ ಜೀವನಕ್ಕೆ ಸಹಕರಿಸುವುದೇ ಶಿವಯೋಗ ಆಗಿದೆ. ಶಿವಯೋಗ ಹೊಸ ವಿಚಾರಗಳಿಗೆ ಅವಿಷ್ಕಾರ ನೀಡಬಲ್ಲುದಾಗಿದೆ ಎಂದು ತಿಳಿಸಿದರು.ಲಿಂಗ ನಿರೀಕ್ಷಣೆಯಿಂದ ಅನುಭವ, ಅಧ್ಯಯನ ಗಟ್ಟಿಗೊಂಡು ಜಟಿಲ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯವಿದೆ ಎಂದು ಹೇಳಿದರು.ಕುಲ ಹದಿನೆಂಟು ಆದರೂ ಭಾವನೆ ಒಂದಾಗಿಸಿದ್ದು ಅನುಭವ ಮಂಟಪ. ಸದ್ಯ ಮುರುಘಾ ಮಠ ಒಂದು ಸಮುದಾಯಕ್ಕೆ ಸ್ವಾಮೀಜಿಗಳನ್ನು ತಯಾರು ಮಾಡಿ ಅನಕ್ಷರತೆ, ಅಂಧಾನುಕರಣೆ ಹಾಗೂ ಮೌಢ್ಯತೆಗಳನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
 

ಪ್ರಮುಖರಾದ ಗೀತಾ ಹಜ್ಜರಗೆ, ಕಾಶಿನಾಥ ಪಾಟೀಲ, ಶಂಕ್ರೆಪ್ಪ ಬುಧೇರಾ, ಮಲ್ಲಿಕಾರ್ಜುನ ಹಾಗೂ ಶಿವಶಂಕರ ಟೋಕರೆ ಅವರಿಂದ ಕೇಳಿಬಂದ ಪ್ರಶ್ನಿಗಳಿಗೆ ಸ್ವಾಮೀಜಿ ಸಮಾಧಾನಕರ ಉತ್ತರ ನೀಡಿದರು.ಸ್ವಾಗತ ಸಮಿತಿಯ ಅಧ್ಯಕ್ಷ ನಾಗಮಾರಪಳ್ಳಿ ಸೂರ್ಯಕಾಂತ, ಪ್ರಮುಖರಾದ ಗುಂಡಪ್ಪ ಬಳತೆ, ಗುರುಶಾಂತಪ್ಪ ನಿಂಗದಳ್ಳಿ, ಡಿ. ಕಾಶಿನಾಥಪ್ಪ, ಶಕುಂತಲಾ ವಾಲಿ, ಪಂಚಾಕ್ಷರಿ ಪಟ್ನೆ ಉಪಸ್ಥಿತರಿದ್ದರು.
 

ADVERTISEMENT

ಮಹಿಳಾ ಬಸವಕೇಂದ್ರದ ಅಧ್ಯಕ್ಷೆ ಕರುಣಾ ಶೆಟಕಾರ ಸ್ವಾಗತಿಸಿದರು. ಪ್ರಶಾಂತ ಹೊನ್ನಾ ನಿರೂಪಿಸಿದರು. ಶೋಭಾ ಮೋಳಕೇರಿ ವಂದಿಸಿದರು.ನಂತರ ವೈಜಿನಾಥ ಸಜ್ಜನಶೆಟ್ಟಿ ಹಾಗೂ ಬಸವಭಾವ್ಯ ಅವರ ಕಲ್ಯಾಣ ಮಹೋತ್ಸವ ಅಂಗವಾಗಿ ಸಂಸ್ಕಾರ ಸಂಗಮ ಕಾರ್ಯಕ್ರಮ ನಡೆಯಿತು. ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು. ನಿಜಗುಣಾನಂದ ಸ್ವಾಮೀಜಿ, ಸಿದ್ಧರಾಮ ಶರಣರು ಬೆಲ್ದಾಳ್, ಶಾಸಕ ಈಶ್ವರ ಖಂಡ್ರೆ, ದಿಲೀಪಕುಮಾರ ತಾಳಂಪಳ್ಳಿ, ಪಂಚಯ್ಯ ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.