ADVERTISEMENT

ಚಿಕಿತ್ಸೆ ದೊರೆಯದೆ ಸಾವು: ದಾಂಧಲೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 6:15 IST
Last Updated 13 ಜುಲೈ 2012, 6:15 IST

ಬಸವಕಲ್ಯಾಣ: ರೋಗಿಯೊಬ್ಬ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಗ್ರಾಮಸ್ಥರು ತಾಲ್ಲೂಕಿನ ಮಂಠಾಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಗ್ರಾಮದ ಧನಶೆಟ್ಟಿ ಸಂಗನಬಟ್ಟೆ (55) ಎನ್ನುವವರೇ ಮೃತಪಟ್ಟವರು. ಅವರ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಸಂಜೆ ಆಸ್ಪತ್ರೆಗೆ ತರಲಾಗಿತ್ತು. ಆದರೆ ವೈದ್ಯರು ಇರಲಿಲ್ಲವಾದ್ದರಿಂದ ಅವರಿಗೆ ಚಿಕಿತ್ಸೆ ಕೊಡಲಾಗಲಿಲ್ಲ. ಹೀಗಾಗಿ ಅವರು ಮೃತಪಟ್ಟರು ಎನ್ನಲಾಗುತ್ತಿದೆ.

ಈ ವಿಷಯ ತಿಳಿದು ಗ್ರಾಮದ ಹತ್ತಾರು ಯುವಕರು ಆಸ್ಪತ್ರೆಗೆ ಧಾವಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಜೀಪಿನ ಗಾಜು ಒಡೆದಿದೆ. ಆಸ್ಪತ್ರೆಯ ಆವರಣದಲ್ಲಿಯೇ ಇರುವ ಸಿಬ್ಬಂದಿಗಳ ವಸತಿಗೃಹಕ್ಕೆ ಹೋಗಿ ಒಳಗಿನ ಜನರನ್ನು ಹೊರಗೆ ಎಳೆದು ತಂದು ಬಾಗಿಲು ಹಾಕಿ ಬೀಗ ಜಡಿದಿದ್ದಾರೆ.


ಹೀಗಾಗಿ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸಿಬ್ಬಂದಿ ರಾತ್ರಿ 1 ಗಂಟೆವರೆಗೆ ಆಸ್ಪತ್ರೆ ಎದುರಿನ ರಸ್ತೆಯಲ್ಲಿಯೇ ಕುಳಿತಿದ್ದರು. ಪೊಲೀಸರು ಆಗಮಿಸಿ ಅವರನ್ನು ಮನೆಗಳಿಗೆ ಹೋಗುವಂತೆ ಕ್ರಮ ಕೈಗೊಂಡರು ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ತಿಳಿದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಾಬುರಾವ ಬೆಲ್ದಾಳೆ, ತಾಲ್ಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಮುಡಬಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಡಾ.ಜಿ.ಎಸ್.ಭುರಳೆ ಇಂದು ಬೆಳಿಗ್ಗೆ ಆಸ್ಪತ್ರೆಗೆ ಭೇಟಿಕೊಟ್ಟು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಮತ್ತು ಗ್ರಾಮದ ಪ್ರಮುಖರ ಸಭೆ ಸಹ ನಡೆಸಲಾಯಿತು. ಸರ್ಕಲ್ ಇನಸ್ಪೆಕ್ಟರ್ ಸಿದ್ಧನಗೌಡ ಪಾಟೀಲ, ಸಬ್ ಇನಸ್ಪೆಕ್ಟರ್ ವಿ.ಎನ್.ಗೋಖಲೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ, ಪ್ರಮುಖರಾದ ಶಿವಕುಮಾರ ಶೆಟಗಾರ್ ಹಾಗೂ ಇತರರು ಪಾಲ್ಗೊಂಡಿದ್ದರು.

ಇದುವರೆಗೆ ಮೂರು ಸಲ ಇಂಥ ಘಟನೆ ನಡೆದಿದೆ. ಆದ್ದರಿಂದ ತಮಗೆ ಇಲ್ಲಿಂದ ಬೇರೆಡೆ ವರ್ಗಾಯಿಸಬೇಕು ಎಂದು ಕೇಳಿಕೊಂಡ ಸಿಬ್ಬಂದಿಯವರು ಕೆಲಕಾಲ ಆಸ್ಪತ್ರೆಯ ಎದುರು ಪಟ್ಟು ಹಿಡಿದು ಕುಳಿತಿದ್ದರು. ಆಸ್ಪತ್ರೆಯ ವೈದ್ಯರು ಮತ್ತು ಇತರೆ ಸಿಬ್ಬಂದಿಯವರು ಸರಿಯಾಗಿ ಕೆಲಸ ನಿರ್ವಹಿಸುವುದಿಲ್ಲ. ರಾತ್ರಿ ಹೊತ್ತಿನಲ್ಲಂತು ಯಾರೂ ಇರುವುದಿಲ್ಲ ಎಂದು ಗ್ರಾಮಸ್ಥರು ದೂರಿದರು.

ಕೊನೆಗೆ, 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತೆ ವೈದ್ಯರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು. ಗ್ರಾಮಸ್ಥರು ಸಹ ಸಣ್ಣಪುಟ್ಟ ಲೋಪಗಳನ್ನು ಮುಂದೆಮಾಡಿ ಜಗಳ ತೆಗೆಯಬಾರದು ಎಂದೂ ಹೇಳಲಾಯಿತು. ಈ ಸಂಬಂಧ ಎರಡೂ ಕಡೆಯಿಂದ ಬಾಂಡ್‌ಪೇಪರ್ ಮೇಲೆ ಬರೆದುಕೊಳ್ಳಲಾಯಿತು ಎಂದು ತಿಳಿದುಬಂದಿದೆ. ನಂತರ ಪರಿಸ್ಥಿತಿ ಶಾಂತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT