ADVERTISEMENT

ಚುನಾವಣೆ ದೂರವಿದ್ದರೂ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 5:40 IST
Last Updated 14 ಜುಲೈ 2012, 5:40 IST

ಬಸವಕಲ್ಯಾಣ: ವಿಧಾನಸಭೆ ಚುನಾವಣೆ ದೂರವಿದೆಯಾದರೂ ಈಚೆಗೆ ಇಲ್ಲಿಗೆ ಆಗಮಿಸಿದ್ದ ಕಾಂಗ್ರೆಸ್ ವೀಕ್ಷಕ ಮಸ್ತಾನ ಅಲಿಯವರು ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಪಡೆದಿದ್ದರಿಂದ ಪಕ್ಷದ ಮುಖಂಡರ ಚಟುವಟಿಕೆಗಳು ಚುರುಕುಗೊಂಡಿದ್ದು ಈ ಬಗ್ಗೆಯೇ ಎಲ್ಲೆಡೆ ಚರ್ಚಿಸಲಾಗುತ್ತಿದೆ.

ಈ ಕ್ಷೇತ್ರದಲ್ಲಿ 40 ವರ್ಷಗಳಿಂದ ಪಕ್ಷದ ಅಭ್ಯರ್ಥಿ ಆಯ್ಕೆಗೊಂಡಿಲ್ಲ. ಆದ್ದರಿಂದ ಚುನಾವಣೆಗೆ ಮುಂಚೆಯೇ ಇಲ್ಲಿ ಸಿದ್ಧತೆ ಕೈಗೊಳ್ಳಬೇಕಾಗಿದೆ. ಪಕ್ಷದ ಇತ್ತೀಚಿನ ನೀತಿಯಂತೆ ಅಭ್ಯರ್ಥಿಗಳ ಹೆಸರು ಮೊದಲೇ ಪ್ರಕಟಿಸಿದರೆ ಅವರಿಗೆ ಪ್ರಚಾರಕ್ಕೆ ಅನುಕೂಲ ಆಗುತ್ತದೆ. ಆದ್ದರಿಂದಲೇ ಚುನಾವಣಾ ಪೂರ್ವದಲ್ಲಿಯೇ ಆಕಾಂಕ್ಷಿಗಳ ಪಟ್ಟಿ ತಯಾರಿಸಲಾಗುತ್ತಿದೆ ಎಂದು ವೀಕ್ಷಕರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಈ ಸಂದರ್ಭದಲ್ಲಿ ಹಳೆಯ ಕಾರ್ಯಕರ್ತರೊಂದಿಗೆ ಹೊಸಬರು ಸಹ ಮನವಿ ಮತ್ತು ಬಯೋಡಾಟಾ ಕೊಟ್ಟಿದ್ದಾರೆ. ಮುಖಂಡರಾದ ಬಿ.ನಾರಾಯಣರಾವ, ಪ್ರಕಾಶ ಪಾಟೀಲ, ಆನಂದ ದೇವಪ್ಪ, ದಯಾನಂದ ಖಳಾಳೆ, ಅಶ್ರಬ್‌ಅಲಿ ಖಾದ್ರಿ, ಸುಧಾಕರ ಗುರ್ಜರ್, ವೆಂಕಟರಾವ ಕುಲಕರ್ಣಿ, ರಾಜಶೇಖರ ಪಾಟೀಲ ಸಸ್ತಾಪುರ, ಡಾ.ಅಜಯ ಜಾಧವ, ಜಗನ್ನಾಥ ತಾಂಬೊಳೆ, ಶಿವರಾಜ ನರಶೆಟ್ಟಿ, ಶರಣು ಬಿರಾದಾರ, ಬಾಳಾಸಾಹೇಬ್ ಕುಲಕರ್ಣಿ, ದತ್ತು ಧುಳೆ ಪಾಟೀಲ, ತಾತೇರಾವ ಮಂಗಳೂರ, ಸಂತೋಷ ಬಿರಾದಾರ ಬಯೋಡಾಟಾ ಕೊಟ್ಟಿದ್ದಾರೆ.

ಇವರಲ್ಲಿ ಕೆಲವರು ಮೌಖಿಕವಾಗಿಯೇ ಚುನಾವಣೆಗೆ ಸ್ಪರ್ಧಿಸುವ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ತಾಲ್ಲೂಕು ಅಧ್ಯಕ್ಷ ಶಂಕರರಾವ ಜಮಾದಾರ, ನಗರ ಘಟಕದ ಅಧ್ಯಕ್ಷ ಅಜರ ಅಲಿ ನವರಂಗ್ ಸಹ ಪಕ್ಷದ ವರಿಷ್ಠರು ಬಯಸಿದರೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಲಾಗಿದೆ.

ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ಕೊಡಬೇಕು. ಹಳೆಯ ಕಾರ್ಯಕರ್ತರನ್ನು ಕಡೆಗಣಿಸಬಾರದು ಎಂದು ವೀಕ್ಷಕರಿಗೆ ಹೇಳಿರುವುದಾಗಿ ಪಕ್ಷದ ಜಿಲ್ಲಾ ಸೇವಾದಳದ ಮಾಜಿ ಅಧ್ಯಕ್ಷ ದಯಾನಂದ ಖಳಾಳೆ ಪ್ರಜಾವಾಣಿಗೆ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಮುಖಂಡರಾದ ಬಿ.ನಾರಾಯಣರಾವ ಅವರಿಗೆ ಟಿಕೆಟ್ ಕೊಡಬೇಕು ಎಂದು ಟೋಕರಿ ಕೋಲಿ ಸಮಾಜ ಮತ್ತು ಗೊಂಡ ಸಮಾಜದ ಮುಖಂಡರಿಂದ ವೀಕ್ಷಕರಿಗೆ ಮನವಿ ಸಲ್ಲಿಸಲಾಯಿತು ಎಂದು ಕೋಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಈಶ್ವರ ಬೊಕ್ಕೆ ಹೇಳಿದ್ದಾರೆ.

ಈಚೆಗೆ ಎಂಜಿನಿಯರ್ ಹುದ್ದೆಯಿಂದ ಸ್ವಯಂನಿವೃತ್ತಿ ಪಡೆದಿರುವ ಶಿವರಾಜ ನರಶೆಟ್ಟಿಯವರು ತಾವೂ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. 40 ವರ್ಷಗಳಲ್ಲಿ ಕಾಂಗ್ರೆಸ್‌ದಿಂದ ಲಿಂಗಾಯತ್‌ರಿಗೆ ಟಿಕೆಟ್ ಕೊಡಲಾಗಿಲ್ಲ. ಮೂರು ಸಲ ಮರಾಠಾ ಮತ್ತು ಒಂದು ಸಲ ಮುಸ್ಲಿಂ ವ್ಯಕ್ತಿಗೆ ಚುನಾವಣೆಗೆ ನಿಲ್ಲಿಸಿದರೂ ಆಯ್ಕೆ ಆಗಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಲಿಂಗಾಯತ್‌ರಿಗೆ ಟಿಕೆಟ್ ಕೊಡಬೇಕು ಎಂದು ಕೇಳಿಕೊಂಡಿದ್ದೇನೆ ಎಂದಿದ್ದಾರೆ.

ಮರಾಠಾ ಸಮಾಜದವರಿಗೆ ಮತ್ತು ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂದು ವೀಕ್ಷಕರಿಗೆ ಮನವಿ ಮಾಡಿಕೊಂಡಿರುವುದಾಗಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ತಾಲ್ಲೂಕು ಅಧ್ಯಕ್ಷ ವಿಕ್ರಮ ಪಾಟೀಲ ಹೇಳಿದ್ದಾರೆ. ರಾಹುಲ್ ಗಾಂಧಿಯವರು ಯುವಕರಿಗೆ ಆದ್ಯತೆ ಕೊಡುತ್ತಿದ್ದಾರೆ. ಆದ್ದರಿಂದ ತಾವು ರಾಜೀವಗಾಂಧಿ ಯೂಥ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿದ್ದು ತಮಗೆ ಟಿಕೆಟ್ ಕೊಡಬೇಕು ಎಂದು ಮನವಿ ಸಲ್ಲಿಸಿರುವುದಾಗಿ ಸಂತೊಷ ಬಿರಾದಾರ ತಿಳಿಸಿದ್ದಾರೆ. ಇವರಲ್ಲಿಯೇ ಒಬ್ಬರಿಗೆ ಟಿಕೆಟ್ ದೊರಕುತ್ತದೋ ಅಥವಾ ಚುನಾವಣೆಯ ಸಂದರ್ಭದಲ್ಲಿ ಬೇರೆ ವ್ಯಕ್ತಿಯೇ ಪ್ರತ್ಯಕ್ಷ ಆಗುತ್ತಾನೋ ಎಂಬುದನ್ನು ಕಾದು ನೋಡಬೇಕಾಗಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.