ADVERTISEMENT

ಜಾತಿಯಿದ್ದರೆ ಸಮಾನತೆಯಿಲ್ಲ: ಅರವಿಂದ ದಳವಾಯಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 8:20 IST
Last Updated 27 ಫೆಬ್ರುವರಿ 2011, 8:20 IST

ಹುಲಸೂರು: ಸಮಾಜದಲ್ಲಿ ಬೇರು ಬಿಟ್ಟಿರುವ, ಜಾತಿ ಪದ್ಧತಿ ನಿರ್ಮೂಲನೆ ಆಗದ ಹೊರತು ಸಮಾನತೆ ಎಂಬುದು ಮಾತುಗಳಲ್ಲಿಯೇ ಉಳಿಯುತ್ತದೆ ಎಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಅರವಿಂದ ದಳವಾಯಿ ಅಭಿಪ್ರಾಯಪಟ್ಟರು. ಹುಲಸೂರು ವೃತ್ತದ ಬೇಲೂರಿನಲ್ಲಿ ಲಿಂ. ಶಿವಲಿಂಗೇಶ್ವರ ಶಿವಯೋಗಿಗಳ 42ನೇ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಳ್ಳಲಾದ ‘ಉರಿಲಿಂಗ ಪೆದ್ದಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಿಂಗಾಯತ ಎಂದರೆ ಜಾತಿಯಲ್ಲ, ಜಾತಿಯಿದ್ದರೆ ಸಮಾನತೆಯಿಲ್ಲ, ಯಾರು ಸಮಾನತೆಯ ಕುರುಹಾದ ‘ಲಿಂಗ’ವನ್ನು ಅಯತ ಮಾಡಿಕೊಳ್ಳುತ್ತಾರೆಯೋ ಅವರೆಲ್ಲ ಲಿಂಗಾಯತರು, ಬಸವಾದಿ ಶರಣರು ಜಿಡ್ಡುಗಟ್ಟಿದ ವೈದಿಕಶಾಹಿ ಪರಂಪರೆಗೆ ಶೆಡ್ಡು ಹೊಡೆದು ನಿಂತರು, ಹೊಸ ಸಮಾಜ ನಿರ್ಮಿಸಿದರು ಎಂದು ಪ್ರತಿಪಾದಿಸಿದರು.

ಗುಲ್ಬರ್ಗಾದ ಚಂದ್ರಕಾಂತ ಗದ್ದಿಗಿ ಮಾತನಾಡಿ, ಇತ್ತೀಚಗೆ ಲಿಂಗಾಯತ ಎಂಬುದು ಜಾತಿ ಪರಂಪರೆಯಾಗಿ ರೂಪುಗೊಂಡಿರುವುದು ವಿಪರ್ಯಾಸದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. ನೇತೃತ್ವ ವಹಿಸಿದ ಕೋಡ್ಲಾ ಉರಿಲಿಂಗ ಪೆದ್ದಿ ಮಠದ ನಂಜುಂಡ ಸ್ವಾಮಿ ಮಾತನಾಡಿ, ಬಸವಾದಿ ಶರಣರು ಸಮಾನತೆಯ ಸಮಾಜವನ್ನು ಕಟ್ಟಿದರು, ಇವನಾರವ ಇವನಾರವ ಎನ್ನದೆ, ಎಲ್ಲರನ್ನು ಅಪ್ಪಿಕೊಳ್ಳುವ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಬಸವಧರ್ಮವನ್ನು ಬೆಳೆಸಿದರು ಎಂದು ವ್ಯಾಖ್ಯಾನಿಸಿದರು.

ಸಾನಿಧ್ಯ ವಹಿಸಿದ್ದ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಸಂಕುಚಿತ ಮನೋಭಾವನೆ, ಕೀಳರಿಮೆ ತೊರೆದರೆ ಮಾತ್ರ ದಲಿತರು ಮುಂದುವರಿಯಲು ಸಾಧ್ಯ, ಉರಿಲಿಂಗ ಪೆದ್ದಿ ಹಾಗೂ ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅವರು ಕರೆ ನೀಡಿದರು. ಸೂರ್ಯಕಾಂತ ಚಿಲ್ಲಾಬಟ್ಟೆ ಸ್ವಾಗತಿಸಿದರು, ಅಂಬಾರಾಯ ಸೈದಾಪುರೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ನಾಗರಿಕರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.