ADVERTISEMENT

ಜಾತಿ– ಅಭಿವೃದ್ಧಿ ನಡುವಿನ ಹೋರಾಟ

ಔರಾದ್ ವಿಧಾನಸಭಾ ಕ್ಷೇತ್ರ: ಕಣದಲ್ಲಿರುವುದು 9 ಅಭ್ಯರ್ಥಿಗಳು

ಚಂದ್ರಕಾಂತ ಮಸಾನಿ
Published 8 ಮೇ 2018, 9:36 IST
Last Updated 8 ಮೇ 2018, 9:36 IST

ಬೀದರ್‌: ರಾಜ್ಯದಲ್ಲೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ವಿಧಾನಸಭಾ ಕ್ಷೇತ್ರ ಔರಾದ್. ಕ್ಷೇತ್ರ ಪುನರ್‌ ವಿಂಗಡನೆಯ ನಂತರ ಮೀಸಲು ಕ್ಷೇತ್ರವಾದ ಮೇಲೆ ಬಿಜೆಪಿಯ ಹಿಡಿತದಲ್ಲಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಏನಾದರೂ ಮಾಡಿ ಕ್ಷೇತ್ರವನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಜಿದ್ದಾಜಿದ್ದಿನ ಹೋರಾಟ ನಡೆಸಿವೆ.

ಶಾಸಕ ಬಿಜೆಪಿಯ ಪ್ರಭು ಚವಾಣ್‌ ಹ್ಯಾಟ್ರಿಕ್‌ ಸಾಧಿಸುವ ವಿಶ್ವಾಸದಲ್ಲಿ ಪ್ರಚಾರ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೆಲ ದಿನಗಳು ಮಾತ್ರ ಬಾಕಿ ಇರುವಾಗ ಕಾಂಗ್ರೆಸ್‌ ಟಿಕೆಟ್‌ ಪಡೆದ ವಿಜಯಕುಮಾರ ಕೌಡಾಳೆ ಹಾಗೂ ಕೆಜೆಪಿಯಿಂದ ಬಿಜೆಪಿ ಸೇರಿ ನಂತರ ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ನಿಂದ ಕಣಕ್ಕೆ ಇಳಿದಿರುವ ಧನಾಜಿ ಜಾಧವ್ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸರ್ವ ರೀತಿಯ ಪ್ರಯತ್ನ ನಡೆಸಿದ್ದಾರೆ.

ಒಟ್ಟು ಒಂಬತ್ತು ಜನ ಕಣದಲ್ಲಿದ್ದು, ಇವರಲ್ಲಿ ಆರು ಅಭ್ಯರ್ಥಿಗಳು ಲಂಬಾಣಿ ಸಮುದಾಯದವರು. ಪರಿಶಿಷ್ಟ ಜಾತಿಯ ಬಲಗೈ ಬಣದ ಇಬ್ಬರು ಹಾಗೂ ಎಡಗೈ ಬಣದ ಒಬ್ಬರು ಇದ್ದಾರೆ. ಜಾತಿ ಲೆಕ್ಕಾಚಾರದಲ್ಲೇ ಅಭ್ಯರ್ಥಿಗಳು ಮತ ಬೇಟೆಯಲ್ಲಿ ತೊಡಗಿದ್ದಾರೆ. ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪರ್ಶ ಜಾತಿಗಳು ಒಂದು ಪಕ್ಷದ ಜತೆಗೆ ಇದ್ದರೆ ಹಾಗೂ ಅಸ್ಪೃಷ್ಯ ಜಾತಿಗಳು ಇನ್ನೊಂದು ಪಕ್ಷದ ಜತೆಗೆ ಗುರುತಿಸಿಕೊಂಡಿವೆ.

ADVERTISEMENT

ಸ್ವಜಾತಿಯ ಆರು ಜನ ಸ್ಪರ್ಧಾ ಕಣದಲ್ಲಿ ಇರುವುದು ಪ್ರಭು ಚವಾಣ್‌ ಅವರಿಗೆ ತಲೆ ನೋವಾಗಿದೆ. ಧನಾಜಿ ಜಾಧವ ನೇತೃತ್ವದಲ್ಲಿ ಒಂದು ಗುಂಪು ಈಗಾಗಲೇ ಬಿಜೆಪಿಯಿಂದ ಹೊರ ಬಂದಿದೆ. ಈ ಗುಂಪು ಏನಾದರೂ ಮಾಡಿ ಬಿಜೆಪಿಯನ್ನು ಸೋಲಿಸಬೇಕು ಎನ್ನುವ ಉದ್ದೇಶದಿಂದ ಜೆಡಿಎಸ್‌ ಸೇರಿದೆ.

‘ಬಿ.ಎಸ್‌. ಯಡಿಯೂರಪ್ಪ ಅವರನ್ನು ನಂಬಿ ನನ್ನ ಮನೆಯೇ ಹಾಳಾಗಿದೆ. ಬಿಜೆಪಿಯವರು ನಂಬಿಕೆ ದ್ರೋಹ ಮಾಡಿದ್ದಾರೆ’ ಎಂದು ಕ್ಷೇತ್ರದಲ್ಲಿ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್‌ನ ಅಭ್ಯರ್ಥಿ ಧನಾಜಿ ಜಾಧವ ಮತದಾರರಿಗೆ ಹೇಳುತ್ತಿದ್ದಾರೆ. ಬೀದರ್‌ನಲ್ಲಿ ಭಾನುವಾರ ನಡೆದ ಜೆಡಿಎಸ್‌–ಬಿಎಸ್‌ಪಿ ಜಂಟಿ ಸಮಾವೇಶದಲ್ಲೂ ಭಾಷಣ ಮಾಡಿ ಅನುಕಂಪದ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.

‘ಪರಿಶಿಷ್ಟರಿಗೆ ದೊರೆಯುವ ಸರ್ಕಾರದ ಸೌಲಭ್ಯಗಳನ್ನು ಲಂಬಾಣಿಗರು ಬಾಚಿಕೊಂಡಿದ್ದಾರೆ. ಮೂಲ ಪರಿಶಿಷ್ಟರ ಸ್ಥಿತಿಗತಿಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಕ್ಷೇತ್ರದಲ್ಲಿ ಸಂಚರಿಸಿ ಸಮೀಕ್ಷೆ ನಡೆಸಿದರೆ ಪರಿಶಿಷ್ಟರ ಪಟ್ಟಿಯಲ್ಲಿರುವ ಸ್ಪರ್ಶ ಹಾಗೂ ಅಸ್ಪೃಷ್ಯ ಜಾತಿಗಳು ಪಡೆದುಕೊಂಡಿರುವ ಸೌಲಭ್ಯಗಳ ನೈಜ ಚಿತ್ರಣ ಸಿಗಲಿದೆ’ ಎನ್ನುತ್ತಾರೆ ಔರಾದ್ ತಾಲ್ಲೂಕಿನ ಮುಸ್ತಾಪುರದ ಧನರಾಜ ನಾಗಪ್ಪ.

‘ಗಂಗಾ ಕಲ್ಯಾಣ ಯೋಜನೆಯಲ್ಲಿ 81 ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದಾರೆ. ಅದರಲ್ಲಿ 43 ಲಂಬಾಣಿಗಳು, 27 ಪರಿಶಿಷ್ಟರ ಬಲಗೈ ಬಣ, 9 ಎಡಗೈ ಬಣ ಹಾಗೂ ಇನ್ನುಳಿದ ಸಮುದಾಯಗಳ ಒಬ್ಬೊಬ್ಬರು ಫಲಾನುಭವಿಇದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಕೊಡುವ ಸೌಲಭ್ಯಗಳಲ್ಲಿ ತಾರತಮ್ಯ ಮಾಡಲಾಗಿದೆ. ಪ್ರಸ್ತುತ ಕ್ಷೇತ್ರದಲ್ಲಿ ಶಾಸಕರ ವಿರೋಧಿ ಅಲೆ ಇದೆ’ ಎಂದು ಹೇಳುತ್ತಾರೆ ಅವರು.

‘ಹತ್ತು ವರ್ಷಗಳ ಹಿಂದೆ ಕ್ಷೇತ್ರ ಹೇಗಿತ್ತು ಎನ್ನುವುದು ಎಲ್ಲರಿಗೂ ತಿಳಿದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಬಹುತೇಕ ಗ್ರಾಮಗಳಿಗೆ ರಸ್ತೆಗಳು ಆಗಿವೆ. ತಾಂಡಾಗಳು ಅಭಿವೃದ್ಧಿ ಕಂಡಿವೆ. ವಿಕಾಸಕ್ಕೆ ಆದ್ಯತೆ ನೀಡಿರುವ ಕಾರಣ ಜನ ನಮ್ಮೊಂದಿಗೆ ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ವಿಶ್ವಾಸದಿಂದ ಹೇಳುತ್ತಾರೆ. ಮೇಲ್ನೋಟಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಕಂಡು ಬಂದರೂ ಜಾತಿ ಹಾಗೂ ಅಭಿವೃದ್ಧಿ ವಿಷಯಗಳು ಈ ಕ್ಷೇತ್ರದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

ಇತರ ಅಭ್ಯರ್ಥಿಗಳು

ದಿಲೀಪಕುಮಾರ ರಾಮಪ್ಪ (ಸರ್ವ ಜನತಾ ಪಕ್ಷ), ಪ್ರಮೋದಕುಮಾರ ನಾಯಕ್‌ (ಎಐಎಂಇಪಿ), ಆನಂದ ರಾಮಚಂದರ್‌ (ಭಾರತೀಯ ಬಹುಜನ ಕ್ರಾಂತಿ ದಳ), ರೋಷನ ಕಾಂಬಳೆ (ಶಿವಸೇನಾ), ಸಂತೋಷ ರಾಠೋಡ ಹಾಗೂ ಚಂದರ್ ನಾಯಕ್ (ಇಬ್ಬರೂ ಪಕ್ಷೇತರ)

2,13,194ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.