ADVERTISEMENT

ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ?

ಕಾಂಗ್ರೆಸ್‌ ಶಾಸಕರಲ್ಲಿ ಪೈಪೋಟಿ: ವರಿಷ್ಠರ ಮೇಲೆ ಪ್ರಮುಖರಿಂದ ಒತ್ತಡ

ಚಂದ್ರಕಾಂತ ಮಸಾನಿ
Published 22 ಮೇ 2018, 10:31 IST
Last Updated 22 ಮೇ 2018, 10:31 IST

ಬೀದರ್‌: ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರ ರಚನೆಯಾಗುವುದು ಖಚಿತವಾದ ನಂತರ ವಿಧಾನಸಭೆಗೆ ನಾಲ್ಕು ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಿಲ್ಲೆಯ ನಾಯಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಪಕ್ಷಗಳ ವರಿಷ್ಠರ ಮೇಲೆ ಒತ್ತಡ ಹಾಕಲು ಇವರು ಬೆಂಗಳೂರಲ್ಲೇ ಬೀಡು ಬಿಟ್ಟಿದ್ದಾರೆ.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಜೆಡಿಎಸ್‌ನ ನಿಷ್ಠಾವಂತ ಮುಖಂಡ ಎಂದು ಗುರುತಿಸಿಕೊಂಡಿರುವ ಬಂಡೆಪ್ಪ ಅವರು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಆಪ್ತರಾಗಿದ್ದಾರೆ. ಇವರಿಗೆ ಸಚಿವ ಸ್ಥಾನ ದೊರೆಯುವುದು ಬಹುತೇಕ ಖಚಿತವಾಗಿದೆ. ಜಿಲ್ಲೆಯ ಮುಖಂಡರಿಗಂತೂ ಬಂಡೆಪ್ಪ ಅವರಿಗೆ ಯಾವ ಖಾತೆ ದೊರೆಯಲಿದೆ ಎನ್ನುವ ಕುತೂಹಲ ಕೆರಳಿಸಿದೆ.

ಆದರೆ, ಕಾಂಗ್ರೆಸ್‌ ಶಾಸಕರ ಸ್ಥಿತಿ ಭಿನ್ನವಾಗಿದೆ. ಹುಮನಾಬಾದ್‌ನಿಂದ ನಾಲ್ಕು ಬಾರಿ ಆಗಿರುವ ಶಾಸಕ ರಾಜಶೇಖರ, ಬೀದರ್‌ನಿಂದ ಮೂರು ಬಾರಿ ಚುನಾಯಿತರಾದ ರಹೀಂ ಖಾನ್‌ ಹಾಗೂ ಹ್ಯಾಟ್ರಿಕ್‌ ಸಾಧನೆ ಮಾಡಿರುವ ಈಶ್ವರ ಖಂಡ್ರೆ ಅವರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ರಾಜಶೇಖರ ಪಾಟೀಲ ಅವರು ಸಚಿವ ಸ್ಥಾನ ದೊರೆಯಲಿದೆ ಎನ್ನುವ ವಿಶ್ವಾಸದಲ್ಲಿದ್ದರೆ. ರಹೀಂ ಖಾನ್‌ ಅವರು ಅಲ್ಪಸಂಖ್ಯಾತರ ಕೋಟಾದಡಿ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ್ದಾರೆ.

ADVERTISEMENT

‘ಅನೇಕ ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಇದ್ದೇನೆ. ಈ ಬಾರಿ ಹೈದರಾಬಾದ್‌ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಮತಗಳನ್ನು ಪಡೆದು ಗೆಲವು ಸಾಧಿಸಿದ್ದೇನೆ. ಹ್ಯಾಟ್ರಿಕ್‌ ಸಾಧಿಸಿರುವ ನನಗೆ ಪಕ್ಷದ ವರಿಷ್ಠರು ಸಚಿವ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ. ಮುಖಂಡರ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳುತ್ತಾರೆ.

‘ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ ಎನ್ನುವುದು ನಿಖರವಾಗಿಲ್ಲ. ಎರಡೂ ಪಕ್ಷಗಳ ವರಿಷ್ಠರು ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್‌ ವರಿಷ್ಠರು ಸೂಚಿಸುವ ಹೆಸರುಗಳಿಗೆ ಸಮನ್ವಯ
ಸಮಿತಿಯಲ್ಲಿ ಒಪ್ಪಿಗೆ ಪಡೆಯಬೇಕು. ಇದಾದ ನಂತರವೇ ಶಾಸಕರಿಗೆ ಸಚಿವ ಸ್ಥಾನ ಕೊಡಲಿದ್ದಾರೆ’ ಎನ್ನುತ್ತಾರೆ ಅವರು.

‘ಹೈದರಾಬಾದ್ ಕರ್ನಾಟಕಕ್ಕೆ ಸೇರಿದ ಅಲ್ಪಸಂಖ್ಯಾತ ಸಮುದಾಯದ ಒಬ್ಬರಿಗೆ ಸಚಿವ ಸ್ಥಾನ ಕೊಡುವುದು ನ್ಯಾಯೋಜಿತವಾಗಿದೆ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಎರಡನೇ ಸಾಲಿನ ನಾಯಕರಲ್ಲಿ ಮುಂಚೂಣಿಯಲ್ಲಿರುವ ಶಾಸಕರಿಗೆ ಒಂದು ಬಾರಿ ಅವಕಾಶ ಕಲ್ಪಿಸಬೇಕು ಎನ್ನುವುದು ನನ್ನ ಬೇಡಿಕೆ. ಪಕ್ಷದ ವರಿಷ್ಠರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ’ ಎನ್ನುತ್ತಾರೆ ಶಾಸಕ ರಹೀಂ ಖಾನ್.

ಈಶ್ವರ ಖಂಡ್ರೆ ಈ ಬಾರಿಯೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ಅವಧಿಯಲ್ಲಿ ಸಚಿವ ಸಂಪುಟದ ಪುನರ್‌ರಚನೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಈಶ್ವರ ಖಂಡ್ರೆಗೆ ಪೌರಾಡಳಿತ ಖಾತೆಯನ್ನು ಕೊಟ್ಟಿದ್ದರು. ಈಗ ಪೂರ್ಣಾವಧಿಗೆ ಸಚಿವ ಸ್ಥಾನ ಕೊಡಬೇಕು ಎನ್ನುವ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ಸಚಿವರಾಗುವ ಅವಕಾಶ ಕೈ ತಪ್ಪಿದರೆ ಕೆಲವು ಶಾಸಕರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಹೆಚ್ಚು ಅವಧಿಗೆ ಶಾಸಕರಾಗಿರುವ ನಾಯಕರಿಗೆ ಮೊದಲು ಸಚಿವ ಸ್ಥಾನ ಕೊಡಬೇಕು ಎನ್ನುವ ಚರ್ಚೆ ಮುಂಚೂಣಿಯಲ್ಲಿದೆ. ಹೀಗಾಗಿ ಹುಮನಾಬಾದ್‌ ಶಾಸಕರಿಗೆ ಸಚಿವ ಸ್ಥಾನ ಸಹಜವಾಗಿ ಒಲಿದು ಬರಲಿದೆ ಎಂದು ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಚರ್ಚೆ ನಡೆದಿದೆ.
**
ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ ಅವರಿಗೆ ಸಚಿವ ಸ್ಥಾನ ದೊರೆಯುವುದು ಖಚಿತ. ಕಾಂಗ್ರೆಸ್‌ ಶಾಸಕರ ಬಗೆಗೆ ಮಾಹಿತಿ ಇಲ್ಲ
– ರಮೇಶ ಪಾಟೀಲ ಸೋಲಪುರ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.