ADVERTISEMENT

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿಕೆ, ಉದ್ಯೋಗಕ್ಕೆ ಕೈಗಾರಿಕೆ ಆರಂಭಿಸುವ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 6:01 IST
Last Updated 16 ಜೂನ್ 2018, 6:01 IST

ಬೀದರ್: ‘ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಿಳಿಸಿದರು.

‘ಗಣಿ ಮತ್ತು ಭೂ ವಿಜ್ಞಾನ  ಸಚಿವ ರಾಜಶೇಖರ ಪಾಟೀಲ ಅವರೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲೆಯ  ಸಮಸ್ಯೆಗಳನ್ನು ನಿವಾರಿಸಲಾಗುವುದು’ ಎಂದು ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಂಸದ ಭಗವಂತ ಖೂಬಾ ಅವರೊಂದಿಗೆ ಮಾತನಾಡಿದ್ದೇನೆ. ಜಿಲ್ಲೆಯ ಶಾಸಕರ ಸಹಕಾರದೊಂದಿಗೆ ದಾಖಲೆಯ ರೂಪದಲ್ಲಿ ಕೆಲಸ ಮಾಡುವ ಇಚ್ಛೆ ನನ್ನದಾಗಿದೆ. ಬೀದರ್‌, ರಾಜ್ಯದ ಕಿರೀಟವಾಗಿದೆ. ಗಡಿಯಲ್ಲಿರುವ ಲಾಭ ಪಡೆದು ಅಭಿವೃದ್ಧಿಯತ್ತ ದಾಪುಗಾಲು ಹಾಕಬೇಕಿದೆ. ಜಿಲ್ಲೆಯ ಗಡಿಯಿಂದ ಕೇವಲ ಎರಡು ಕಿ.ಮೀ ಅಂತರದಲ್ಲಿರುವ ತೆಲಂಗಾಣದ ಹೊಸೂರ ಗ್ರಾಮದಲ್ಲಿ ಕೈಗಾರಿಕೆಗಳು ತಲೆ ಎತ್ತಿವೆ. ಆದರೆ, ಕೈಗಾರಿಕೆಗಳ ಸ್ಥಾಪನೆ ವಿಷಯದಲ್ಲಿ ನಾವು ಹಿಂದೆ ಉಳಿದಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಒಂದು ಕಡೆ ಹೈದರಾಬಾದ್, ಇನ್ನೊಂದು ಕಡೆ ಸೊಲ್ಲಾಪುರ, ಪುಣೆ ನಗರಗಳು ಇವೆ. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳು ಇಲ್ಲಿವೆ. ಜಿಲ್ಲೆಯಲ್ಲಿ ಗೃಹ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುವುದು. ಪ್ರತಿಯೊಂದು ಗ್ರಾಮದಲ್ಲಿ ಗೃಹ ಕೈಗಾರಿಕೆಯನ್ನು ಆರಂಭಿಸುವ ದಿಸೆಯಲ್ಲಿ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳು ಇವೆ. ಹಿಂದೆ ಕೃಷಿ ಸಚಿವನಾಗಿದ್ದಾಗ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೀದರ್‌ ಉತ್ಸವ ಆಯೋಜಿಸಿ ರಾಷ್ಟ್ರಮಟ್ಟದ ಗಮನ ಸೆಳೆಯುವಂತೆ ಮಾಡಿದ್ದೆ. ಜಿಲ್ಲೆಯ ಪ್ರವಾಸೋದ್ಯಮದ ಬೆಳವಣಿಗೆಗೆ ನನ್ನ ಪ್ರಯತ್ನ ಮುಂದುವರಿಯಲಿದೆ’ ಎಂದು ತಿಳಿಸಿದರು.

‘ಹತ್ತು ವರ್ಷಗಳ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರೊಂದಿಗೆ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಮನೆ ಪಾಠ ಮಾಡುವ ವ್ಯವಸ್ಥೆ ಮಾಡಿದ್ದೆ. ಈಗ ಕುಸಿದಿರುವ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ನಗರದಲ್ಲಿ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಇದ್ದರೂ ಜನ ಸಾಮಾನ್ಯರಿಗೆ ಸರಿಯಾದ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ. ಚಿಕಿತ್ಸೆಗಾಗಿ ನೆರೆಯ ಹೈದರಾಬಾದ್, ಉದಗಿರ ಹಾಗೂ ಸೊಲ್ಲಾಪುರಕ್ಕೆ ಹೋಗುವುದನ್ನು ನಿಲ್ಲಿಸುವವರೆಗೂ ಇಲ್ಲಿಯ ಜನಕ್ಕೆ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲವೆಂದೇ ಭಾವಿಸಬೇಕು’ ಎಂದು ತಿಳಿಸಿದರು.

‘ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಆರಂಭಿಸಲು ಸಿದ್ಧರಿದ್ದೇವೆ. ಕಾರ್ಖಾನೆ ಶುರು ಮಾಡಲು ಕನಿಷ್ಠ ₹ 45 ಕೋಟಿಯಾದರೂ ಅಗತ್ಯವಿದೆ. ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಸಹಕಾರ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ತಪ್ಪು ಎಸಗಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮೊದಲು ತನಿಖೆ ನಡೆಸಿ ವರದಿ ತರಿಸಿಕೊಳ್ಳಲಾಗುವುದು. ತಪ್ಪಿತಸ್ಥರಿಗೆ ರಕ್ಷಣೆ ಒದಗಿಸುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ, ಅಶೋಕ ಕರಂಜಿ, ರವಿ ಮೂಲಗೆ ಇದ್ದರು.

120 ಕೆ.ಜಿ. ಕೇಕ್: ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕಾಶೆಂಪುರ ಅವರ ಕಟ್ಟಾ ಬೆಂಬಲಿಗರಾಗಿರುವ ನಗರಸಭೆ ಸದಸ್ಯ ನಬಿ ಖುರೇಶಿ ಅವರು ಹೈದರಾಬಾದ್‌ನವರು 120 ಕೆ.ಜಿ.ಯ ಕೇಕ್ ಸಿದ್ಧಪಡಿಸಿದ್ದರು.
ಕಾಶೆಂಪುರ ಅವರ ಭಾವಚಿತ್ರವನ್ನು ಹೊಂದಿದ್ದ ಕೇಕ್ ಮೇಲೆ ಇಂಗ್ಲಿಷ್‌ನಲ್ಲಿ ಹ್ಯಾಪಿ ಬರ್ತ್ ಡೇ ಎಂದು ಬರೆಯಲಾಗಿತ್ತು.

ಶುಕ್ರವಾರ ನಸುಕಿನ ಜಾವ ನಬಿ ಖುರೇಶಿ ಅವರು ನಗರದ ಗಾವಾನ್ ಚೌಕ್ ಬಳಿ ಸಚಿವ ಬಂಡೆಪ್ಪ ಕಾಶೆಂಪುರ ಅವರಿಂದಲೇ ಕೇಕ್ ಕತ್ತರಿಸಿ ಅಭಿಮಾನ ಮೆರೆದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಕೇಕ್ ವಿತರಿಸಿ ಸಂತಸ ಹಂಚಿಕೊಂಡರು. ನಬಿ ಖುರೇಶಿ ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿದ್ದಾರೆ.

ಅಭಿನಂದಿಸಲು ಮುಗಿಬಿದ್ದ ಅಭಿಮಾನಿಗಳು

ಬೀದರ್‌: ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ತಮ್ಮ 54ನೇ ಜನ್ಮದಿನದ ಪ್ರಯುಕ್ತ ಬೆಳಿಗ್ಗೆ ಖಾನಾಪುರದ ಮೈಲಾರ ಮಲ್ಲಣ್ಣ ಹಾಗೂ ಮಂಗಲಪೇಟೆಯ ಭವಾನಿ ದೇವಿಯ ದರ್ಶನ ಪಡೆದರು. ನಂತರ ತಮ್ಮ ಮನೆಯಂಗಳದಲ್ಲಿ ನಿರ್ಮಿಸಿದ್ದ ಚಿಕ್ಕ ವೇದಿಕೆಯಲ್ಲಿ ಜನ್ಮದಿನ ಅಚರಿಸಿಕೊಂಡರು.

ಜೆಡಿಎಸ್‌ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಂಡೆಪ್ಪ ಅವರಿಗೆ ಜನ್ಮದಿನದ ಶುಭಾಶಯ ಕೋರಲು ಬೆಳಿಗ್ಗೆಯಿಂದಲೇ ಮನೆಯ ಆವರಣದಲ್ಲಿ ಕಾದು ಕುಳಿತಿದ್ದರು.

ಪ್ರತಿಯೊಬ್ಬರು ಹೂಮಾಲೆ, ಪುಷ್ಪಗುಚ್ಛ ಹಾಗೂ ಕೇಕ್‌ ಹಿಡಿದುಕೊಂಡು ಬರುತ್ತಿದ್ದುದು ಮಧ್ಯಾಹ್ನದವರೆಗೂ ಸಾಮಾನ್ಯವಾಗಿತ್ತು. ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರೂ ಸಹ ಅವರ ನಿವಾಸಕ್ಕೆ ಬಂದು ಶುಭ ಕೋರಿದರು. ಮನೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಮನೆಯಂಗಳದಲ್ಲಿ ಅಭಿಮಾನಿಗಳಿಗೆ ಕುಳಿತುಕೊಳ್ಳಲು ಆಸನ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ಜನ ಗುಂಪು ಗುಂಪಾಗಿ ಬರುತ್ತಿದ್ದರಿಂದ ಓಲ್ಡ್‌ಸಿಟಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಗೃಹ ಕೈಗಾರಿಕೆಗಳನ್ನು ಬಲಪಡಿಸಲು ರಾಜ್ಯದ ಸ್ವಸಹಾಯ ಸಂಘಗಳಿಗೆ ಒಂದು ಸಾವಿರ ಕೋಟಿ ರೂಪಾಯಿ ಸಾಲ ಕೊಡಲಾಗಿದೆ
- ಬಂಡೆಪ್ಪ ಕಾಶೆಂಪುರ,  ಸಹಕಾರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.