ADVERTISEMENT

ಝೀರಾ ಪ್ರಕಟ ಸಮಾಗಮಕ್ಕೆ ಹರಿದು ಬಂದ ಭಕ್ತ ಸಮೂಹ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2012, 10:15 IST
Last Updated 29 ಏಪ್ರಿಲ್ 2012, 10:15 IST
ಝೀರಾ ಪ್ರಕಟ ಸಮಾಗಮಕ್ಕೆ ಹರಿದು ಬಂದ ಭಕ್ತ ಸಮೂಹ
ಝೀರಾ ಪ್ರಕಟ ಸಮಾಗಮಕ್ಕೆ ಹರಿದು ಬಂದ ಭಕ್ತ ಸಮೂಹ   

ಬೀದರ್: ಗುರುನಾನಕರು ಬೀದರ್‌ಗೆ ಭೇಟಿ ನೀಡಿದ 500ನೇ ವರ್ಷಾಚರಣೆ ಅಂಗವಾಗಿ ನಗರದ ಗುರುದ್ವಾರದಲ್ಲಿ ನಡೆಯುತ್ತಿರುವ ಝೀರಾ ಪ್ರಕಟ ಸಮಾಗಮದ ಮೂರನೇ ದಿನದ ಪಂಜಾಬ್ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಗುರುನಾನಕರ ಭಕ್ತರ ಸಮೂಹ ಹರಿದು ಬಂದಿತ್ತು.

ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸಿದ್ದು, ಭಕ್ತಿ ಶ್ರದ್ಧೆಯಿಂದ ಪಾಲ್ಗೊಂಡಿದ್ದರು. ಗುರುದ್ವಾರದಲ್ಲಿ ನಡೆಯುತ್ತಿರುವ ಸಮಾರಂಭವೂ ಜಾತ್ರೆಯಾಗಿ ಪರಿವರ್ತನೆ ಹೊಂದಿತ್ತು.

ಭಕ್ತಾದಿಗಳಿಗಾಗಿ ಗುರುದ್ವಾರದ ವಿವಿಧಡೆ ಉಚಿತ ಆರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯ ಹಿನ್ನೆಲೆಯಲ್ಲಿ ಅಲ್ಲಲ್ಲಿ ತಂಪು ಪಾನೀಯಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಗುರುದ್ವಾರದ ಮುಖ್ಯ ರಸ್ತೆಯಲ್ಲಿ ಅಳ್ಳು, ಬೆಂಡುಬತಾಸಿ ಮತ್ತಿತರ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲಾಗಿತ್ತು.

ಶನಿವಾರ ಮಹಾರಾಷ್ಟ್ರದ ಔರಂಗಾಬಾದ್‌ನಿಂದ ದಿಂದ ಬಂದ ಪಂಚ ಪ್ಯಾರೆಗಳ ನೇತೃತ್ವದಲ್ಲಿ ಬಂದ ಅಲಂಕೃತ ವಾಹದಲ್ಲಿ ಪಲ್ಲಕಿ ಆಗಮಿಸಿತ್ತು. ಗುರುದ್ವಾರ ಗೇಟ್‌ನಿಂದ ಗುರುದ್ವಾರದವರೆಗೆ ಮೆರವಣಿಗೆ ನಡೆದಿದ್ದು, ಭಕ್ತರು ಪಂಚ ಪ್ಯಾರೆಗಳಿಗೆ ನಮಸ್ಕರಿಸಿ, ಹೂಮಾಲೆ ಹಾಕುವ ಮೂಲಕ ಬರ ಸ್ವಾಗತಿಸಿಕೊಂಡರು. ಜೊತೆಗೆ `ಸತ್ ನಾಮ್ ವೈ ಗುರು~ ಎಂಬ ಧಾರ್ಮಿಕ ಪಠಣದೊಂದಿಗೆ ಪಲ್ಲಕಿಗೆ ಸ್ವಾಗತಿಸಿದರು.

ಪಂಜಾಬನ ಅಮೃತ್‌ಸರ್‌ನಿಂದ ಬಂದ ಗುರುನಾನಕ ಬಾಬ್ ಅವರ ಸೈನಿಕರು ನಡೆಸಿದ ಆನೆ ಹಾಗೂ ಕುದರೆಗಳ ಮೆರವಣಿಗೆ ಆಕರ್ಷಣೆಯಾಗಿತ್ತು. ಅಮೃತ್‌ಸರ್‌ದಿಂದ ಎರಡು ಆನೆಗಳು ಹಾಗೂ ಅನೇಕ ಕುದುರೆಗಳನ್ನು ಕರೆತರಲಾಗಿತ್ತು.

 ಏಪ್ರಿಲ್ 29 ರಂದು (ಭಾನುವಾರ) ನಗರದ ಮುಖ್ಯ ರಸ್ತೆಯಲ್ಲಿ ಗುರುನಾನಕರ ಭವ್ಯ ಮೆರವಣಿಗೆ ನಡೆಯಲಿದ್ದು, ಉತ್ಸವ ಸಮಾರೋಪಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.