ADVERTISEMENT

ಠಾಕ್ರೆ ವಿರುದ್ಧ ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 5:35 IST
Last Updated 7 ಜುಲೈ 2012, 5:35 IST

ಔರಾದ್: ಬೆಳಗಾವಿ ಮಹಾನಗರ ಪಾಲಿಕೆ ಸೂಪರ್‌ಸೀಡ್ ಮಾಡಿರುವ ಕರ್ನಾಟಕ ಸರ್ಕಾರ ವಜಾ ಮಾಡುವಂತೆ ಮಹಾರಾಷ್ಟ್ರದ ಶಿವಸೇನೆ ನಾಯಕ ಬಾಳ ಠಾಕ್ರೆ ಹೇಳಿಕೆಗೆ ಇಲ್ಲಿಯ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ವೇದಿಕೆ ಪ್ರಮುಖ ಶಶಿಧರ ಕೊಸಂಬೆ, ಸೋಮನಾಥ ಮುಧೋಳಕರ್, ಪ್ರಕಾಶ ಅಲ್ಮಾಜೆ, ರಾಜಕುಮಾರ ಯಡವೆ ನೇತೃತ್ವದಲ್ಲಿ ಇಲ್ಲಿಯ ಕನ್ನಡಾಂಬೆ ವೃತ್ತದ ಬಳಿ ಶುಕ್ರವಾರ ಮಿಂಚಿನ ಪ್ರತಿಭಟನೆ ನಡೆಸಿ ಠಾಕ್ರೆ ಪ್ರತಿಕೃತಿ ದಹಿಸಿದರು.

ಠಾಕ್ರೆ ಅವರು ಆಗಾಗ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಗಡಿಭಾಗದ ಮರಾಠಿ ಮತ್ತು ಕನ್ನಡ ಭಾಷಿಕರ ನಡುವಿನ ಸೌಹಾರ್ದ ಕೆಡಿಸುತ್ತಿದ್ದಾರೆ. ಕರ್ನಾಟಕ ಸರ್ಕಾರವನ್ನು ಗಲ್ಲಿಗೇರಿಸಬೇಕೆಂಬ ಅವರ ಹೇಳಿಕೆ ರಾಜ್ಯದ ಆರು ಕೋಟಿ ಕನ್ನಡಿಗರ ಮನಸ್ಸಿಗೆ ಅಘಾತವನ್ನುಂಟು ಮಾಡಿದೆ ಎಂದು ಕರವೇ ಕಾರ್ಯಕರ್ತರು ಠಾಕ್ರೆ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದರು.

ರಾಜಕೀಯ ಲಾಭಕ್ಕಾಗಿ ಈ ರೀತಿ ಅತಿರೇಕದ ಹೇಳಿಕೆ ನೀಡಿ ಭಾಷಾ ಬಾಂಧವ್ಯಕ್ಕೆ ಭಂಗ ತರುತ್ತಿರುವ ಬಾಳ ಠಾಕ್ರೆ ಅವರನ್ನು ದೇಶದಿಂದ ಗಡಿಪಾರು ಮಾಡುವಂತೆ ಈ ವೇಳೆ ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಒತ್ತಾಯಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.