ADVERTISEMENT

ತೊಗರಿಯಲ್ಲಿ ಗೊಡ್ಡುರೋಗ: ಚಿಂತೆಯಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 5:45 IST
Last Updated 16 ಸೆಪ್ಟೆಂಬರ್ 2011, 5:45 IST

ಜನವಾಡ: ಬೀದರ್ ಜಿಲ್ಲೆಯ ವಿವಿಧೆಡೆ ತೊಗರಿ ಬೆಳೆಯಲ್ಲಿ ಗೊಡ್ಡು ರೋಗ ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಗೊಡ್ಡು ರೋಗವು ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ತೊಗರಿ ಬೆಳೆಗಾರರಿಗೆ ಮಾರಕವಾಗಿ ಪರಿಣಮಿಸಿದೆ. ಶೇ. 10 ರಿಂದ 90 ರಷ್ಟು ಇಳುವರಿ ಕಡಿತ ಆಗುವುದೇ ಇದಕ್ಕೆ ಕಾರಣವಾಗಿದೆ.

ಗೊಡ್ಡು ರೋಗವನ್ನು ಸ್ಥಳೀಯವಾಗಿ ಲಕ್ಕಿ ರೋಗ, ಸೊಡ್ಡು ರೋಗ, ಬಂಜೆ ರೋಗ ಎಂದು ಕರೆಯಲಾಗುತ್ತದೆ. ರೋಗ ಬಾಧಿತ ಗಿಡಗಳ ಎಲೆಗಳು ತಿಳಿ ಹಳದಿ ಬಣ್ಣದ ಚಿಹ್ನೆಗಳನ್ನು ಹೊಂದಿರುತ್ತವೆ.

ಸಾಮಾನ್ಯ ಗಿಡಗಳಂತೆ ಹೂ ಮತ್ತು ಕಾಯಿ ಬಿಡದೆ ಕೇವಲ ಎಲೆ ಮಾತ್ರ ಹೊಂದುವ ಮೂಲಕ ಗೊಡ್ಡಾಗಿ ಉಳಿಯುತ್ತವೆ ಎಂದು ತಿಳಿಸುತ್ತಾರೆ ಬೀದರ್ ತಾಲ್ಲೂಕಿನ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ಶಾಸ್ತ್ರಜ್ಞ ಡಾ. ಸುನೀಲ ಕುಲಕರ್ಣಿ.

ಗೊಡ್ಡು ರೋಗ ನಂಜಾಣು(ವೈರಸ್) ರೋಗವಾಗಿದೆ. ರೋಗ ಬಂದ ಮೇಲೆ ಹತೋಟಿಗೆ ತರುವುದು ಕಷ್ಟಕರ. ಮೈಟ ನುಸಿಗಳಿಂದ ಗಾಳಿಯ ಮೂಲಕ ರೋಗ ಸ್ಥಳದಿಂದ ಸುಮಾರು 2 ಕಿ.ಮೀ. ವರೆಗೆ ಹರಡುತ್ತದೆ ಎಂದು ಹೇಳುತ್ತಾರೆ.

ರೈತರು ಈ ರೋಗ ನಿರ್ವಹಣೆಗೆ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡುತ್ತಾರೆ.

ರೋಗದ ಆರಂಭಿಕ ಹಂತದಲ್ಲಿ ರೋಗ ತಗುಲಿದ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ನಂತರ ನುಶಿನಾಶಕಗಳಾದ ಡೈಕೋಫಾಲ್ 20 ಇ.ಸಿ 2.5 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಮುಂದಿನ ಹಂಗಾಮಿನಲ್ಲಿ ಕೈಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು: ತೊಗರಿ ಬೆಳೆ ಕಟಾವು ಆದ ನಂತರ ಕೊಯ್ಲು ಆದಷ್ಟು ಬೇಗ ತೆಗೆದು ಹೊಲವನ್ನು ಸ್ವಚ್ಛವಾಗಿಡಬೇಕು. ಕುಳೆ ಅಥವಾ ರಟುನ್ ಬೆಳೆಯನ್ನು ತೆಗೆದುಕೊಳ್ಳಬಾರದು. ಹೊಲಗಳ ಬದುಗಳ, ನೀರಿನ ಕಾಲುವೆಗಳ ಮೇಲೆ ಬೆಳೆದ ತೊಗರಿ ಗಿಡಗಳನ್ನು ಕಿತ್ತಿ ನಾಶಪಡಿಸಬೇಕು.
 
ಪರ್ಯಾಯ ಬೆಳೆಗಳಿಂದ ಬೆಳೆ ಪರಿವರ್ತನೆ ಮಾಡಬೇಕು. ಗೊಡ್ಡು ರೋಗ ಇರುವಂಥ ಪ್ರದೇಶಗಳಲ್ಲಿ ಮಾರುತಿ ತಳಿಯನ್ನು ಬೆಳೆಯಬಾರದು. ರೋಗವನ್ನು ತಡೆದುಕೊಳ್ಳುವ ಅಥವಾ ನಿರೋಧಕ ಶಕ್ತಿ ಹೊಂದಿರುವ ತಳಿಗಳಾದ ಐ.ಸಿ.ಪಿ.ಎಲ್-87119 (ಆಶಾ) ಅಥವಾ ಬಿ.ಎಸ್.ಎಂ.ಆರ್-736 ಎಂಬ ತಳಿಗಳನ್ನು ಉಪಯೋಗಿಸಬೇಕು ಎಂದು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸುವಂತೆ ಕೋರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.