ಹುಮನಾಬಾದ್: ತೊಗರಿ ಖರೀದಿ ವಿಷಯದಲ್ಲಿ ಕ್ಷೇತ್ರದ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಶಾಸಕ ರಾಜಶೇಖರ ಪಾಟೀಲ ಭರವಸೆ ನೀಡಿದರು. ಇಲ್ಲಿನ ಎ.ಪಿ.ಎಂ.ಸಿ ಕಚೇರಿಯಲ್ಲಿ ಮಂಗಳವಾರ ರಾತ್ರಿ ತೊಗರಿ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಬಾರಿ ತೊಗರಿ ಕೊಂಚ ಕೆಟ್ಟಿರುವ ಸಾಧ್ಯತೆಗಳಿವೆ. ಕಳಪೆ ತೊಗರಿ ಎಂಬ ಇತ್ಯಾದಿ ಕಾರಣ ಒಡ್ಡಿ ರೈತರಿಗೆ ಅನ್ಯಾಯ ಮಾಡದೇ ಹೆಚ್ಚಿನ ಬೆಲೆ ನೀಡುವ ಮೂಲಕ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ರೈತರ ಪುಣ್ಯಕ್ಕೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.
ರೈತರು ಕೂಡಾ ಬೆಂಬಲ ಬೆಲೆ ಪಡೆಯುವುದಕ್ಕಾಗಿ ಬೇಕಾದ ಅಗತ್ಯ ದಾಖಲಾತಿಗಳನ್ನು ಇಲಾಖೆಗೆ ತಪ್ಪದೇ ನೀಡಬೇಕು ಎಂದರು. ಪ್ರತಿ ರೈತರಿಂದ ಕೇವಲ 20ಕ್ವಿಂಟಲ್ ತೊಗರಿಯನ್ನು ರೂ. 4ಸಾವಿರದಂತೆ ಖರೀದಿಸಲು ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು.
ಆರ್ಥಿಕ ಸಮಸ್ಯೆಗೆ ಶಕ್ತಿಮೀರಿ ಸಹಕಾರ ನೀಡಲು ಬದ್ಧವಿರುವುದಾಗಿ ಭರವಸೆ ನೀಡಿದ ಪಾಟೀಲ, ನಗರದ ಎ.ಪಿ.ಎಂ.ಸಿ ಸಾಕಷ್ಟು ಅಭಿವೃದ್ಧಿ ಆಗಬೇಕಿದೆ ಆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸರ್ವ ನಿರ್ದೇಶಕರು ಪಕ್ಷಾತೀತ ಶ್ರಮಿಸಬೇಕಿದೆ ಎಂದು ಮಾರ್ಗದರ್ಶನ ನೀಡಿದರು.
ಈ ಎಲ್ಲದರ ಜೊತೆಗೆ ಮಾರುಕಟ್ಟೆಯಲ್ಲಿನ ವ್ಯಾಪಾರಸ್ಥರು ಆದಾಯ ತೆರಿಗೆ ಪಾವತಿಸದಿರುವುದು ಗಮನಕ್ಕೆ ಬಂದಿದೆ. ಸಾಧ್ಯವಾದಷ್ಟು ಶೀಘ್ರ ಆದಾಯ ತೆರಿಗೆ ಪಾವತಿಸಿದಲ್ಲಿ ವ್ಯಾಪಾರಸ್ಥರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಸೂಚ್ಯವಾಗಿ ನುಡಿದ ಅವರು ಹುಮನಾಬಾದ್ ಎ.ಪಿ.ಎಂ.ಸಿ ಈಗಲೂ ನಮ್ಮ ಹಿಡಿತದಲ್ಲಿದೆ ಎನ್ನುವ ಮೂಲಕ ಸರ್ವರನ್ನೂ ಪೇಚಿಗೆ ಸಿಲುಕಿಸಿದರು.
ಸಮಿತಿ ಅಧ್ಯಕ್ಷ ನಾರಾಯಣರೆಡ್ಡಿ ಮಂಗಲಗಿ, ನಿರ್ದೇಶಕ ಸಂಜೀವರೆಡ್ಡಿ ಬಿರಾದಾರ, ಈಶ್ವರ ಬಿ.ಕಲ್ಬುರ್ಗಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಪಿ.ಮಾಳಶೆಟ್ಟಿ, ಎ.ಪಿ.ಎಂ.ಸಿ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.