ADVERTISEMENT

ದೇವಸ್ಥಾನ ನಿರ್ಮಾಣಕ್ಕೆ 3 ಲಕ್ಷ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:05 IST
Last Updated 9 ಅಕ್ಟೋಬರ್ 2012, 9:05 IST

ಹುಮನಾಬಾದ್: ಶ್ರೀ ವಿಶ್ವಕರ್ಮ ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ನಿಧಿಯಿಂದ ರೂ. 3 ಲಕ್ಷ ಅನುದಾನ ನೀಡುವುದಾಗಿ ಶಾಸಕ ರಾಜಶೇಖರ ಪಾಟೀಲ ತಿಳಿಸಿದರು. ತಾಲ್ಲೂಕಿನ ಘಾಟಬೋರಾಳ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ  ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.

ಈ ಹಿಂದೆ ಹುಸಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿದ್ದ ಈ ಗ್ರಾಮ 2008ರ ಚುನಾವಣೆ ನಂತರ ಹುಮನಾಬಾದ್ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದು, ಹಿಂದೆಂದಿಗಿಂತಲೂ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂಬುದಕ್ಕೆ ಈ ಕ್ಷೇತ್ರದಲ್ಲಿನ ಅತೀ ಹೆಚ್ಚು ಗ್ರಾಮಗಳನ್ನು ಸುವರ್ಣ ಗ್ರಾಮೋದಯಕ್ಕೆ ಆಯ್ಕೆ ಮಾಡಿಕೊಂಡಿದ್ದೇ ಸಾಕ್ಷಿ ಎಂದು ತಿಳಿಸಿದರು. ಪಂಚಾಳ ಸಮೂದಾಯ  ಬಂಧುಗಳು ತಮ್ಮ  ಪರಂಪರಾಗತ ಕುಲಕಸುಬಿನ ಜೊತೆಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಆರ್ಥಿಕವಾಗಿ ಸದೃಢರಾಗಿಸಬೇಕು ಎಂದು ಸಲಹೆ ನೀಡಿದರು.

ಘಾಟಬೋರಾಳ ಜನತೆ ಬಗ್ಗೆ ಯಾವತ್ತೂ ತಮಗೆ ವಿಶೇಷ ಗೌರವವಿದೆ. ಸಮಸ್ಯೆಗಳು ಇರುವುದು ಗಮನಕ್ಕೆ ತಂದಲ್ಲಿ ತಕ್ಷಣ ಬಗೆಹರಿಸಲು  ಪ್ರಯತ್ನಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 

ಜಿಲ್ಲಾ ಪಂಚಾಯಿತಿ ಸದಸ್ಯೆ ತಂಗುಬಾಯಿ ಮಾಣಿಕರಾವ ಪರಾಂಜಪೆ ಮಾತನಾಡಿ, ವಿಶ್ವಕರ್ಮ ದೇವಸ್ಥಾನದ ನಿರ್ಮಾಣಕ್ಕೆ ತಮ್ಮ ನಿಧಿಯಿಂದ ರೂ. 3ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದರು. ಗ್ರಾಮದ ಗಣ್ಯರಾದ  ಡಾ.ಪ್ರಕಾಶ ಪಾಟೀಲ, ವೆಂಕಟರಾವ ಪಾಟೀಲ ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ಯಾದಗಿರಿಯ ಕುಮಾರಸ್ವಾಮಿಜಿ ಆಶೀರ್ವಚನ ನೀಡಿದರು. 

ಎ.ಪಿ.ಎಂ.ಸಿ ಉಪಾಧ್ಯಕ್ಷ ಶಿವಾಜಿ ಗಣೇಶ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದತ್ತಕುಮಾರ ಚಿದ್ರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ ಮುಳೆ, ಸುಭಾಷ ಗಣೇಶ, ಶಿವಾಜಿ ರಘು, ರಾಜಕುಮಾರ ಪಾಟೀಲ, ಸಂಜೀವರೆಡ್ಡಿ, ಬಾಲಾಜಿ ಪಾಟೀಲ ಮೊದಲಾದವರು ವೇದಿಕೆಯಲ್ಲಿ ಇದ್ದರು. ದಯಾನಂದ ಪಂಚಾಳ ಅಧ್ಯಕ್ಷತೆ ವಹಿಸಿದ್ದರು. ಚಳಕಾಪೂರದ ಪ್ರಭಾಕರಶಾಸ್ತ್ರಿ ಪಂಚಾಳ ಪ್ರಾಸ್ತಾವಿಕ ಮಾತನಾಡಿದರು. ರಾಜಕುಮಾರ ಪಾಟೀಲ ಸ್ವಾಗತಿಸಿದರು. ಪ್ರಭು ಪಂಚಾಳ ನಿರೂಪಿಸಿದರು.

ಸಂಜೀವರೆಡ್ಡಿ ವಂದಿಸಿದರು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಮುಖ್ಯಬೀದಿಗಳ ಮೂಲಕ ಶ್ರೀ ವಿಶ್ವಕರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು. ತಾಲ್ಲೂಕಿನ ಸಾವಿರಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.