ADVERTISEMENT

ನಗರಸಭೆಯಿಂದ ಸ್ವಚ್ಛತೆೆ ಆರಂಭವಾಗಲಿ!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 8:50 IST
Last Updated 24 ಮಾರ್ಚ್ 2014, 8:50 IST

ಬೀದರ್‌: ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆಗೆ ಒತ್ತು ನೀಡುವ ಪ್ರಾಥಮಿಕ ಹೊಣೆಗಾರಿಕೆಯಿರುವ ನಗರಸಭೆಗೆ ಹೊಸ ಸಾರಥಿಗಳು ಬಂದಿದ್ದಾರೆ. ಮೀಸಲಾತಿಗೆ ಅನುಗುಣವಾಗಿ ಮಹಿಳೆಯರೇ ನಗರಸಭೆಯ ಚುಕ್ಕಾಣಿ ಹಿಡಿದಿದ್ದಾರೆ.

ನಗರಸಭೆ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆದ ಒಂದು ವರ್ಷದ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ. ನಗರದಲ್ಲಿ ಸ್ವಚ್ಛತೆಯ ಕೊರತೆ ಪ್ರಶ್ನೆ ಮೂಡಿದಾಗಲೆಲ್ಲಾ ಚುನಾಯಿತ ಪ್ರತಿನಿಧಿಗಳು ಇಲ್ಲ ಎಂಬ ನೆಪ ಬರುತ್ತಿತ್ತು.

ಈಗ ಅಂಥ ನೆಪ ಇರುವುದಿಲ್ಲ. ಹೊಸದಾಗಿ ಅಧ್ಯಕ್ಷೆಯಾಗಿರುವ ಫಾತಿಮಾ  ಅನ್ವರ್ ಅಲಿ, ಸ್ವಚ್ಛ ಮತ್ತು ಹಸಿರುಮಯ ನಗರವಾಗಿ ಅಭಿವೃದ್ಧಿ ಪಡಿಸಲು ಪ್ರಾಶಸ್ತ್ಯ ನೀಡುವುದಾಗಿ ಹೇಳಿದ್ದಾರೆ.

ಅಧ್ಯಕ್ಷರು ನಿಮಿತ್ತವಾದರೂ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಕೈಜೋಡಿಸುವುದೂ ಅಗತ್ಯ. ಕಳೆದ ಅವಧಿಯಲ್ಲೂ ಸದಸ್ಯೆಯಾಗಿದ್ದ ಫಾತಿಮಾ ತಮ್ಮ ನೇರ ಮಾತುಗಳಿಂದ ಗಮನಸೆಳೆದವರು. ಅಭಿವೃದ್ಧಿ ಮತ್ತು ಸ್ವಚ್ಛ ನಗರ ಮಾಡುವ ಚಿಂತನೆ ನಗರಸಭೆ ಅಂಗಳದಿಂದಲೇ ಆರಂಭವಾಗಲಿ ಎಂಬ ಮಾತು ಕೇಳಿಬಂದಿದೆ.

ಏಕೆಂದರೆ, ನಿತ್ಯ ನೂರಾರು ಸಾರ್ವಜನಿಕರು ಭೇಟಿ ನೀಡುವ ನಗರಸಭೆಯ ಆವರಣದಲ್ಲಿ ಈಗಲೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಇದ್ದರೂ ಅದರ ಸ್ಥಿತಿ ನಗರಸಭೆಯ ಆಡಳಿತ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿ ಉಳಿದಿದೆ.

ಮುರಿದು ಬಿದ್ದ ಪರಿಕರಗಳು, ಖಾಲಿ ಬಾಟಲಿಗಳು, ತ್ಯಾಜ್ಯಗಳನ್ನು ಬಿಸಾಡುವ ತಾಣವಾಗಿ ಅಲ್ಲಿನ ಶೌಚಾಲಯ ಬದಲಾಗಿದೆ. ಪರಿಣಾಮ ತುರ್ತು ಸಂದರ್ಭದಲ್ಲಿ ಅನಧಿಕೃತವಾಗಿ ನಗರಸಭೆ ಆವರಣವೇ ತಾತ್ಕಾಲಿಕ ಶೌಚಾಲಯವಾಗಿ ಬಿಡುತ್ತದೆ. ಇನ್ನು ಮಹಿಳೆಯರ ಪಾಡು ಹೇಳುವಂತೆಯೇ ಇಲ್ಲ.

ಈ ಕುರಿತು ಸದಸ್ಯರೊಬ್ಬರು ಹೇಳಿದ್ದು, ‘ಸಮಸ್ಯೆ ಇರುವುದು ನಿಜ. ಚುನಾವಣೆ ನಡೆದ ಒಂದು ವರ್ಷದ ಬಳಿಕ ಅಧಿಕಾರಕ್ಕೆ ಬಂದಿದ್ದೇವೆ. ಮೂಲಸೌಕರ್ಯ ಅಭಿವೃದ್ಧಿಗೆ ಖಂಡಿತ ಒತ್ತು ನೀಡುತ್ತೇವೆ’.

ಅಧಿಕಾರಗಳ ಆಡಳಿತಾವಧಿಯಲ್ಲಿ ನಗರಸಭೆ ಕಚೇರಿ ಎದುರು ಸಾರ್ವಜನಿಕರ ವಾಹನ ನಿಲುಗಡೆ, ಉದ್ಯಾನ ಅಭಿವೃದ್ಧಿ ಕುರಿತು ಕ್ರಮ ಕೈಗೊಳ್ಳುವ ಉತ್ತಮ ಕೆಲಸ ಆಗಿದ್ದರೂ, ಆವರಣ ಇನ್ನೂ ತ್ಯಾಜ್ಯ, ನಿರುಪಯೋಗಿ ವಸ್ತುಗಳ ತಾಣವಾಗಿಯೂ ಬಳಕೆಯಾಗುತ್ತಿದೆ.

ಇದನ್ನು ತಪ್ಪಿಸಿ ಲಭ್ಯವಿರುವ ಸ್ಥಳವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಸದಸ್ಯರು ಚಿಂತನೆ ನಡೆಸಿದರೂ ಉತ್ತಮ ಹೆಜ್ಜೆಯಾದೀತು. ಹೊಸ ಸದಸ್ಯರಿಗೂ ನಿಜಕ್ಕೂ ಸ್ವಚ್ಚ ನಗರ ರೂಪಿಸುವ ಹೊಣೆಗಾರಿಕೆ, ಆಸಕ್ತಿ ಇದ್ದರೆ ಆ ಕಾರ್ಯವನ್ನು ನಗರಸಭೆಯ ಅಂಗಳದಿಂದಲೇ ಆರಂಭಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.