ADVERTISEMENT

ನಗುನಗುತ ಬಾಳಲು ಕಲಿಯಿರಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 10:00 IST
Last Updated 11 ಮಾರ್ಚ್ 2011, 10:00 IST

ಬಸವಕಲ್ಯಾಣ: ಇಲ್ಲಿನ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಒಂದು ತಿಂಗಳಪರ್ಯಂತ ನಡೆದ ವಿಜಾಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನದ ಸಮಾರೋಪ ಸಮಾರಂಭ ಗುರುವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮುಚಳಂಬ ಪ್ರಣವಾನಂದ ಸ್ವಾಮಿ, ಬೆಲ್ದಾಳ ಸಿದ್ಧರಾಮ ಶರಣರು, ಮಾಜಿ ಶಾಸಕ ಎಂ.ಜಿ.ಮುಳೆ, ಮುಖಂಡರಾದ ವೈಜನಾಥ ಕಾಮಶೆಟ್ಟಿ, ಪ್ರೊ.ವಿಜಯಲಕ್ಷ್ಮಿ ಗಡ್ಡೆ, ಕಾಶಪ್ಪ ಸಕ್ಕರಬಾವಿ, ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ, ಬಿಕೆಡಿಬಿ ಆಯುಕ್ತ ಕಾಶಿನಾಥ ಗೋಕಳೆ, ಗುರಪ್ಪ ಶರಣರು ಮಾತನಾಡಿ ಪ್ರವಚನದಿಂದ ದೊರೆತ ಜ್ಞಾನ, ಆಗಿರುವ ಬದಲಾವಣೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಜಾತಿ, ಧರ್ಮದ ಬಗ್ಗೆ ಪ್ರವಚನ ಹೇಳದೆ ಸಹಬಾಳ್ವೆ, ಸುಂದರ ಬದುಕಿನ ಸೂತ್ರಗಳನ್ನು ಕಲಿಸಿದ್ದಾರೆ ಎಂದರು. ವರ್ಷ ವರ್ಷವೂ ಇಲ್ಲಿ ಪ್ರಚನ ನಡೆಸಬೇಕು ಎಂದು ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಮನವಿ ಮಾಡಿಕೊಂಡರು. ನೇತೃತ್ವ ವಹಿಸಿದ್ದ ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ ಜೀವನದಲ್ಲಿನ ಕಷ್ಟ, ನಷ್ಟ ಮತ್ತು ಕಹಿ ಘಟನೆಗಳನ್ನು ಮರೆತು ನಗುನಗುತ ಬಾಳಬೇಕು. ಎಂಥ ಪ್ರಸಂಗ ಬಂದರೂ ಜಗಳ ಮಾಡಿದ ಮರುಕ್ಷಣ ಒಂದಾಗುವ ಮಕ್ಕಳಂತೆ ಜೀವನ ಸಾಗಿಸಿದರೆ ಪರಮಸುಖಿ ಆಗುತ್ತಿರಿ ಎಂದರು.

ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಉಪಾಧ್ಯಕ್ಷ ಗದಗೆಪ್ಪ ಹಲಶೆಟ್ಟಿ ಹಾಗೂ ನಿರ್ದೇಶಕರು ಮತ್ತು ಗಣ್ಯರು ಉಪಸ್ಥಿತರಿದ್ದರು. ಜನಸಾಗರ: ಕೊನೆಯ ಪ್ರವಚನ ಇರುವುದರಿಂದ ಅಪಾರ ಜನರು ನೆರೆದಿದ್ದರು. ‘ಸ್ವಾಮೀಜಿಯವರು ಪ್ರವಚನದಲ್ಲಿ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಒಂದು ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ. ಇನ್ನೂ ಕೆಲ ದಿನಗಳವರೆಗೆ ಪ್ರವಚನ ನಡಿಬೇಕಾಗಿತ್ತು’ ‘ಬೆಳಿಗ್ಗೆ 8 ಗಂಟೆವರೆಗೆ ತಾವು ಏಳುತ್ತಿರಲಿಲ್ಲ. ಆದರೆ ಪ್ರವಚನ ಆರಂಭ ಆದಾಗಿನಿಂದ ನಸುಕಿನಲ್ಲಿಯೇ ಎದ್ದು ಸ್ನಾನ ಮಾಡುವುದು ಅಭ್ಯಾಸವಾಗಿದೆ’ ಎಂದು ಜನರು ತಮ್ಮ ತಮ್ಮಲ್ಲಿ ಮಾತನಾಡುತ್ತಿರುವುದು ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.