ADVERTISEMENT

ನಾಲೆ ನೀರಿನೊಂದಿಗೆ ಹರಿದು ಎರಡು ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 8:30 IST
Last Updated 4 ಜುಲೈ 2012, 8:30 IST

ಬಸವಕಲ್ಯಾಣ: ಮಳೆಯಿಂದ ತುಂಬಿ ಹರಿಯುತ್ತಿದ್ದ ನಾಲೆಯನ್ನು ದಾಟುವಾಗ ನೀರಿನಲ್ಲಿ ಸಿಕ್ಕಿಕೊಂಡು ಬಾಲಕ ಒಳಗೊಂಡು ಇಬ್ಬರು ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ಖೇರ್ಡಾ ಹತ್ತಿರ ಸೋಮವಾರ ರಾತ್ರಿ ನಡೆದಿದೆ.

ಧನಸಿಂಗ್ ಚವ್ಹಾಣ (58) ಮತ್ತು ಆತನ ಮೊಮ್ಮಗ ಸಚಿನ್ (11) ಎಂಬುವವರೇ ಮೃತಪಟ್ಟ ದುರ್ದೈವಿಗಳು. ಇವರು ಖೇರ್ಡಾ ಹತ್ತಿರದ ಶಂಕ್ರು ತಾಂಡಾದವರಾಗಿದ್ದಾರೆ. ಸಚಿನ್ ಹುಮನಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ 6 ನೇ ತರಗತಿಯಲ್ಲಿ ಓದುತಿದ್ದ. ತಮ್ಮೂರಿನಿಂದ ಪ್ರತಿದಿನ ಅಲ್ಲಿಗೆ ಹೋಗಿ ಬರುತ್ತಿದ್ದ.

ತಾಂಡಾದವರೆಗೆ ವಾಹನ ವ್ಯವಸ್ಥೆ ಇಲ್ಲದ್ದರಿಂದ ಹುಮನಾಬಾದ್‌ದಿಂದ ಹಳ್ಳಿಖೇಡ್‌ವರೆಗೆ ಬಸ್‌ನಲ್ಲಿ ಆಗಮಿಸಿದ ಆತನನ್ನು ಕರೆದುಕೊಂಡು ಬರಲು ಧನಸಿಂಗ್ ಚವ್ಹಾಣ ಹೋಗಿದ್ದರು. ಆದರೆ ಮಳೆ ಬರುತಿದ್ದ ಕಾರಣ ಅವರು ಹಳ್ಳಿಖೇಡದಲ್ಲಿ ಕೆಲಕಾಲ ನಿಂತಿದ್ದಾರೆ. ಗಂಟೆಗಟ್ಟಲೇ ಕಾದರೂ ಮಳೆ ನಿಲ್ಲುವ ಸೂಚನೆ ಕಾಣದಿದ್ದರಿಂದ ರಾತ್ರಿ ಕತ್ತಲಲ್ಲಿಯೇ ನಡೆದುಕೊಂಡು ಊರಿಗೆ ಹೊರಟಿದ್ದಾರೆ.

ದಾರಿಯಲ್ಲಿನ ಖೇರ್ಡಾ ಹತ್ತಿರದ ಗಂಗ್ಯಾನ್‌ನಾಲಾ ತುಂಬಿ ಹರಿಯುತ್ತಿದ್ದರೂ ಅವರು ಹಾಗೆಯೇ ದಾಟಲು ಯತ್ನಿಸಿದ್ದಾರೆ. ಧನಸಿಂಗ್ ಅವರ ಕಣ್ಣುಗಳಿಗೆ ಮೊದಲೇ ಕಾಣುತ್ತಿರಲಿಲ್ಲ.  ಆದ್ದರಿಂದ ನಾಲೆಯಲ್ಲಿ ಕಾಲಿಡುತ್ತಿದ್ದಂತೆಯೇ ರಭಸದಿಂದ ಹರಿಯುತಿದ್ದ ನೀರಿನ ಸೆಳೆತಕ್ಕೆ ಒಳಗಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ರಾತ್ರಿಯಾದರೂ ಇವರು ಮನೆಗೆ ಆಗಮಿಸದ ಕಾರಣ ಮೃತರ ಕುಟುಂಬದವರು ಚಿಂತಿತರಾಗಿದ್ದಾರಾದರೂ ಮಳೆ ಬರುತಿದ್ದರಿಂದ ಎಲ್ಲಿಯಾದರೂ     ಉಳಿದುಕೊಂಡಿರಬಹುದು ಎಂದು ಸುಮ್ಮನಾಗಿದ್ದಾರೆ.

ಮಂಗಳವಾರ       ಬೆಳಿಗ್ಗೆಯೂ ಅವರ ಪತ್ತೆಯೇ ಇಲ್ಲದ್ದರಿಂದ ಹುಡುಕಲು ಆರಂಭಿಸಿದ್ದಾರೆ.
ನಾಲೆ ತುಂಬಿ ಹರಿದಿದ್ದರಿಂದ      ಏನಾದರೂ ಅವಘಡ ಘಟಿಸಿದೆಯೇ ಎಂಬ ಸಂಶಯ ಕಾಡಿದ್ದರಿಂದ ನಾಲೆಯಲ್ಲಿ ಹುಡುಕಿದ್ದಾರೆ. ಆಗ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಅವರ ಮೃತದೇಹಗಳು ಪತ್ತೆಯಾಗಿವೆ.

ಸಬ್ ಇನಸ್ಪೆಕ್ಟರ್ ತುಕಾರಾಮ ಮೇತ್ರೆ ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ಪಂಚನಾಮೆ                      ನಡೆಸಿದ್ದಾರೆ. ಬಸವಕಲ್ಯಾಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಲಾಯಿತು. ಈ ಸಂಬಂಧ ತಾಲ್ಲೂಕಿನ ಮುಡಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.