ADVERTISEMENT

ನಿಷ್ಟ್ರಿಯ ಪೊಲೀಸ್ ವ್ಯವಸ್ಥೆಗೆ ಖಂಡ್ರೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:55 IST
Last Updated 14 ಫೆಬ್ರುವರಿ 2011, 8:55 IST

ಭಾಲ್ಕಿ: ಪಟ್ಟಣದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿ ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿವೆ. ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಕಳವು, ಮಟ್ಕಾ, ಮಾನಭಂಗ, ಮಾದಕ ದೃವ್ಯ ಮಾರಾಟ, ವೇಶ್ಯಾವಾಟಿಕೆಯಂಥ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸ್ ವ್ಯವಸ್ಥೆ ಕಣ್ಣು ಮುಚ್ಚಿ ಕುಳಿತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಲ್ಕಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು.ಪ್ರಾಥಮಿಕ ಶಾಲೆಯಲ್ಲಿ ಓದುವಂಥ ಮುಗ್ಧ ಬಾಲಕಿಯರ ಮೇಲೆ ವಿಕೃತ ಕಾಮುಕರ ಅತ್ಯಾಚಾರದಂಥ ಘೋರ ಕೃತ್ಯಗಳು ನಡೆದಿವೆ. ಮಹಿಳಾ ದೌರ್ಜನ್ಯದ ಪ್ರಕರಣಗಳು ನಡೆಯುತ್ತಲೇ ಇವೆ. ಪಟ್ಟಣದ ಕೆಲವು ಕಡೆ ವೇಶ್ಯಾವಾಟಿಕೆ, ಮಟ್ಕಾ, ಜೂಜು, ಮಾದಕ ದೃವ್ಯದ ಮಾರಾಟಗಳು ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇಷ್ಟಾದರೂ ಪೊಲೀಸರು ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವದು ಖಂಡನೀಯ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಇಂಥ ನಿಷ್ಕ್ರೀಯತೆಗೆ ಜಿಲ್ಲಾಡಳಿತ ಮತ್ತು ಸರ್ಕಾರವೇ ನೇರ ಹೊಣೆ ಎಂದು ದೂರಿದರು. ಕೊಲೆ, ಸುಲಿಗೆ, ಗುಂಡಾಗರ್ದಿ ಪ್ರವೃತ್ತಿ ಹೆಚ್ಚಾದರೂ ಪೊಲೀಸ್ ಅಧಿಕಾರಿಗಳುಸುಮ್ಮನಿರುವದನ್ನು ಇನ್ನು ಮುಂದೆ ಸಹಿಸಲಾಗುವದಿಲ್ಲ. ವಾರದೊಳಗೆ ಅತ್ಯಾಚಾರ, ಸುಲಿಗೆ, ಕಳ್ಳತನ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಯಾರದೇ ಮುಲಾಜಿಲ್ಲದ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಅಪರಾಧಿಗಳ ವಿರುದ್ಧ ಕ್ರಮ ಜರುಗಿಸದೇ ಹೋದರೆ ಪೊಲೀಸ್ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುವದಾಗಿ ಈಶ್ವರ ಖಂಡ್ರೆ ಎಚ್ಚರಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.