ADVERTISEMENT

ನೀರು ಪೂರೈಸಿ ₹ 97.43 ಲಕ್ಷ ಪಡೆದ ಶಾಸಕರ ಬೆಂಬಲಿಗರು

ಬೀದರ್‌: ನಗರಸಭೆ ಮಾಜಿ ಸದಸ್ಯ ಎಂ.ಎ. ಮಜೀದ್ ಆರೋಪ

​ಪ್ರಜಾವಾಣಿ ವಾರ್ತೆ
Published 5 ಮೇ 2018, 9:46 IST
Last Updated 5 ಮೇ 2018, 9:46 IST

ಬೀದರ್‌: ‘2016ರಲ್ಲಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಟ್ಯಾಂಕರ್‌ ಮೂಲಕ ನೀರು ಪೂರೈಸಿದ್ದಕ್ಕೆ ಶಾಸಕ ರಹೀಂ ಖಾನ್ ಬೆಂಬಲಿಗರು ₹ 97.43 ಲಕ್ಷ ಪಡೆದುಕೊಂಡಿದ್ದಾರೆ’ ಎಂದು ನಗರಸಭೆ ಮಾಜಿ ಸದಸ್ಯ ಎಂ.ಎ. ಮಜೀದ್ ಆರೋಪಿಸಿದರು.

‘ಶಾಸಕರ ಸಂಬಂಧಿ ಜಹೀರ್‌ ರಿಜ್ವಾನ್‌ ₹ 18.04 ಲಕ್ಷ, ಜುನೇದ್‌ ಅಹಮ್ಮದ್ ₹ 30.74 ಲಕ್ಷ ಹಾಗೂ ಮಹೇಶ ಚಿಂತಾಮಣಿ ₹ 48.64 ಲಕ್ಷ ಪಡೆದುಕೊಂಡಿದ್ದಾರೆ. ನೀರು ಸರಬರಾಜು ಮಾಡಲಾದ ಟ್ರ್ಯಾಕ್ಟರ್, ಭಾರಿ ವಾಹನ ಹಾಗೂ ಆಟೊ ಇವು ಮಹಮ್ಮದ್‌ ವಾಹೀದರ್, ಶಾಸಕರು ಅಧ್ಯಕ್ಷರಾಗಿರುವ ರೂಹಿ ಶಿಕ್ಷಣ ಸಮೂಹ ಸಂಸ್ಥೆ, ಬಸವರಾಜ ಸಿಂಧೋಲ್ ಅವರ ಹೆಸರಲ್ಲಿ ಇವೆ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

‘ನಗರಸಭೆ ಹಾಗೂ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಮೂಲಕ ಅನೇಕ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಂದೇ ರಸ್ತೆಯನ್ನು ಎರಡು ಯೋಜನೆಗಳಲ್ಲಿ ತೋರಿಸಿ ಹಣ ಪಡೆಯಲಾಗಿದೆ. ಇದರಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದು, ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಒಟ್ಟು ಏಳು ಪ್ರಮುಖ ಕಾಮಗಾರಿಗಳನ್ನು ಹೈದರಾಬಾದ್‌ನ ಆರ್‌ಎಂಎನ್ ಇನ್ಫ್ರಾಸ್ಟಕ್ಚರ್‌ ಲಿಮಿಟೆಡ್‌ ಕಂಪನಿಗೆ ಗುತ್ತಿಗೆ ಕೊಡಲಾಗಿದೆ. ಈ ಕಂಪನಿ ಉಪ ಗುತ್ತಿಗೆದಾರರ ಮೂಲಕ ರಾತ್ರೋರಾತ್ರಿ ಅರ್ಧಮರ್ಧ ಕೆಲಸ ಮಾಡಿಸಿದೆ. ಕೆಲವು ಕಡೆ ಟೆಂಡರ್ ಕರೆಯುವ ಮೊದಲೇ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟವನ್ನೂ ಕಾಯ್ದುಕೊಂಡಿಲ್ಲ’ ಎಂದು ಅವರು ದೂರಿದರು.

‘ವಾರ್ಡ್‌ ನಂ.1ರಲ್ಲಿ ಆಸ್ತಾನಾ ರಸ್ತೆಯಿಂದ ರಾವ್‌ ತಾಲೀಂ ವರೆಗೆ ₹ 40 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಿಸಿ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ವಾರ್ಡ್‌ ನಂ.3ರಲ್ಲಿ ನಯಾಕಮಾನ್‌ ದಿಂದ ಮಸ್ಜೀದ್‌ಪುರ ವರೆಗಿನ ಚಾಂದಬೀಬಿ ರಸ್ತೆಯಲ್ಲಿ ₹ 50 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರಿಕರಣ ಮಾಡಲಾಗಿದೆ ಎಂದು ದಾಖಲೆ ತೋರಿಸಿದರೆ, ಇನ್ನೊಂದು ದಾಖಲೆಯಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಿ ಹಣ ಎತ್ತಲಾಗಿದೆ’ ಎಂದು ಆರೋಪಿಸಿದರು.

‘ನಗರಸಭೆ ಅನೇಕ ಆವಾಂತರಗಳನ್ನು ಮಾಡಿದ್ದು, ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಮೊದಲು ಮದುವೆ ನಂತರ ಅರತಕ್ಷತೆ ಮಾಡಿಕೊಂಡಂತೆ ಇದೆ. ಗುಂಪಾದ ಕೃಷಿ ಕಾಲೊನಿಯಲ್ಲಿ ರಸ್ತೆ ಕಾಮಗಾರಿಯನ್ನು ಮೊದಲೇ ಪೂರ್ಣಗೊಳಿಸಿ ನಂತರ ಟೆಂಡರ್‌ ಕರೆಯಲಾಗಿದೆ. ಕೆಲವು ರಸ್ತೆ ವಿಸ್ತರಣೆ ಮಾಡಿ ಡಬಲ್‌ ರಸ್ತೆ ನಿರ್ಮಾಣ ಮಾಡಿರುವ ವೆಚ್ಚ ಉಲ್ಲೇಖಿಸಿ ಹಣ ಪಡೆದಿರುವ ಮಾಹಿತಿ ಲಭ್ಯವಾಗಿದೆ’ ಎಂದು ಹೇಳಿದರು.

‘ಸರ್ಕಾರಿ ಜಾಗದಲ್ಲಿ ಶಾಸಕರ ಶಿಕ್ಷಣ ಸಂಸ್ಥೆಗಳ ಕಟ್ಟಡಗಳು ಇವೆ. ಚಿದ್ರಿ ಗ್ರಾಮದ ಸರ್ವೇ ಸಂಖ್ಯೆ 199, 200 ಹಾಗೂ 362 ಜಮೀನು ವಿನ್ಯಾಸಕ್ಕೆ ಪ್ರಾಧಿಕಾರ ಅನುಮೋದನೆಯಾಗಿಲ್ಲ. ಕಟ್ಟಡ ಪರವಾನಗಿಯನ್ನೂ ಪಡೆದಿಲ್ಲ ಎಂದು ನಗರಸಭೆ ಸ್ಪಷ್ಟಪಡಿಸಿದೆ. ಆದರೆ ಶಾಸಕರು ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿ ಒದಗಿಸುತ್ತಿಲ್ಲ’ ಎಂದು ಆರೋಪಿಸಿದರು.

**
ನಗರಸಭೆ ಅನೇಕ ಆವಾಂತರಗಳನ್ನು ಮಾಡಿದ್ದು, ದಾಖಲೆಗಳನ್ನು ಸೂಕ್ಷವಾಗಿ ಪರಿಶೀಲಿಸಿದರೆ ಮದುವೆ ನಂತರ ಅರತಕ್ಷತೆ ಮಾಡಿಕೊಂಡಂತೆ ಇದೆ – ಎಂ.ಎ. ಮಜೀದ್, ನಗರಸಭೆ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.