ADVERTISEMENT

ನೈರ್ಮಲ್ಯ: ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದ ಮಳೆ

ನಗರ ಸಂಚಾರ

ಉ.ಮ.ಮಹೇಶ್
Published 17 ಜೂನ್ 2013, 10:58 IST
Last Updated 17 ಜೂನ್ 2013, 10:58 IST
ಬೀದರ್ ನಗರದ ಜನವಾಡಾ ರಸ್ತೆಯಲ್ಲಿ ಇರುವ ಬ್ಯಾಕ್‌ವರ್ಡ್ ಹಾಸ್ಟೆಲ್ ಆವರಣದ ಸ್ಥಿತಿ
ಬೀದರ್ ನಗರದ ಜನವಾಡಾ ರಸ್ತೆಯಲ್ಲಿ ಇರುವ ಬ್ಯಾಕ್‌ವರ್ಡ್ ಹಾಸ್ಟೆಲ್ ಆವರಣದ ಸ್ಥಿತಿ   

ಬೀದರ್: ನಗರ ಸ್ವಚ್ಚತೆಯ ದೃಷ್ಟಿಯಿಂದ ನಗರಸಭೆಗೆ ಮಳೆಗಾಲ ಪಾಠವಾಗಬೇಕು. ಆದರೆ, ಪ್ರತಿ ಮಳೆಗಾಲ ಬಂದಾಗಲೂ ನಗರದ ಮಟ್ಟಿಗೆ ಪರಿಸ್ಥಿತಿ ಬದಲಾಗುವುದಿಲ್ಲ.

   ತ್ಯಾಜ್ಯ ವಿಲೇವಾರಿಯ ದೃಷ್ಟಿಯಿಂದ ಮೊದಲೇ ಅವ್ಯವಸ್ಥೆಯ ಕೂಪವಾಗಿರುವ ನಗರದಲ್ಲಿ ಮಳೆಯ ನೀರು ಸೇರಿ ನಗರ ಸಾರ್ವಜನಿಕರಿಗೆ ಕಿರಿಕಿರಿಯ ಅನುಭವ ನೀಡುತ್ತಿದೆ.

ಒಂದೆಡೆ ಸುರಿವ ಮಳೆಯ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಅಲ್ಲಿಯೇ ನಿಂತು ಪಾದಚಾರಿಗಳು, ವಾಹನಗಳ ಸಂಚಾರಕ್ಕೂ ಕಿರಿಕಿರಿ ಎನಿಸಿದರೆ; ಇದಕ್ಕೂ ದೊಡ್ಡದಾಗಿ ವಿಲೇವಾರಿ ಯಾಗದ ತ್ಯಾಜ್ಯ ಕೊಳೆತು ಗಬ್ಬು ನಾರುವ ಸ್ಥಿತಿ ಬರುತ್ತಿದೆ.

ನಗರದ ಬಸವೇಶ್ವರ ವೃತ್ತ, ರೋಟರಿ ವೃತ್ತದ ಆವರಣ, ಗುಂಪಾ ರಸ್ತೆ ಹೀಗೆ ಎಲ್ಲ ಕಡೆಯೂ ಕಾಣ ಬರುವ ಚಿತ್ರಣ. ಸ್ವಚ್ಛತೆ ಕಾಣದ ಚರಂಡಿಗಳು ತ್ಯಾಜ್ಯದಿಂದ ತುಂಬಿದ್ದು, ದಿನೇ ದಿನೇ ಹೆಚ್ಚುವರಿ ಕಸ ಸೇರ್ಪಡೆಯಾಗುತ್ತಿದೆ.  ಸುರಿದ ನೀರು ಹರಿದು ಹೋಗುವ ಸಾಧ್ಯತೆ ಇಲ್ಲ.

ಒಂದೆಡೆ, ಡೆಂಗೇ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ಭೀತಿಯ ಹಿನ್ನೆಲೆಯಲ್ಲಿ ನೈರ್ಮಲ್ಯದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಕೋರುತ್ತಾರೆ.

ಇನ್ನೊಂದೆಡೆ ನೈರ್ಮಲ್ಯ ರಕ್ಷಣೆಯಲ್ಲಿ ಪ್ರದಾನ ಪಾತ್ರ ವಹಿಸಬೇಕಾದ ಸ್ಥಳೀಯ ಆಡಳಿತವಾದ ನಗರಸಭೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ.

ಕಸ ಸಾಗಣೆ ಕುರಿತಂತೆ ನಗರಸಭೆಯ ನಿರ್ಲಕ್ಷ್ಯವನ್ನು ಗಮನಿಸಬೇಕಾದರೆ ನಗರಸಭೆ ಆವರಣಕ್ಕೆ ಭೇಟಿ ನೀಡಬೇಕು.
ಸುಸ್ಥಿತಿಯಲ್ಲಿ ಇಲ್ಲದ ಕಸ ಸಾಗಣೆ ವಾಹನಗಳು, ಸ್ವಚ್ಛತಾ ಪರಿಕರಗಳು ಅಲ್ಲಿ ತುಕ್ಕು ಹಿಡಿಯುತ್ತಾ ಬಿದ್ದಿವೆ. ಈ ಕುರಿತು ಹಿಂದೆ ಗಮನಸೆಳದಾಗ ನಗರಸಭೆ ಆಯುಕ್ತರು ಪೌರಕಾರ್ಮಿಕರ ಕೊರತೆಯ ಕಾರಣ ನೀಡಿದ್ದರು.

ಮಳೆಗಾಲದ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಕುರಿತ ಮಾಹಿತಿಗಾಗಿ ನಗರಸಭೆ ಆಯುಕ್ತರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ನೂತನ ಸದಸ್ಯರು ಚುನಾಯಿತರಾಗಿದ್ದರು ಇನ್ನೂ ಚುನಾಯಿತ ಮಂಡಳಿ ಅಧಿಕಾರಕ್ಕೆ ಬಂದಿಲ್ಲ.  ಸದ್ಯ, ಜಿಲ್ಲಾಧಿಕಾರಿಗಳೇ ನಗರಸಭೆಯ ಆಡಳಿತಾಧಿಕಾರಿಗಳು ಆಗಿದ್ದಾರೆ. ಸ್ವಚ್ಚತೆ ಬಗೆಗೆ ತಾತ್ಕಾಲಿಕ ಪರಿಹಾರ ಕ್ರಮಗಳಿಗಾದರೂ ಒತ್ತು ನೀಡುತ್ತಾರಾ ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.