ADVERTISEMENT

ಪಡಿತರ ಧಾನ್ಯಕ್ಕೆ ಪರದಾಟ: ದೂರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 5:05 IST
Last Updated 17 ಏಪ್ರಿಲ್ 2012, 5:05 IST

ಬಸವಕಲ್ಯಾಣ: ತಿಂಗಳಲ್ಲಿ ಒಂದೆರಡು ದಿನ ಮಾತ್ರ ಪಡಿತರ ಧಾನ್ಯ ವಿತರಿಸುವ ಕಾರಣ ನಾಗರಿಕರು ಸಂಕಟ ಅನುಭವಿಸುತ್ತಿದ್ದಾರೆ ಎಂದು ಇಲ್ಲಿನ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ನಗರದಲ್ಲಿನ ನ್ಯಾಯ ಬೆಲೆ ಅಂಗಡಿಯವರು ಮತ್ತು ಸೀಮೆ ಎಣ್ಣೆ ವಿತರಕರು ಆಹಾರಧಾನ್ಯಕ್ಕೆ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ತಿಂಗಳಲ್ಲಿ ಒಂದೆರಡು ದಿನ ಯಾರಿಗೂ ಗೊತ್ತಾಗದಂತೆ ಆಹಾರಧಾನ್ಯ ವಿತರಿಸಿ ನಂತರ ಎಲ್ಲ ಮುಗಿದಿದೆ ಎಂದು ಹೇಳಿ ಅಂಗಡಿ ಬಾಗಿಲು ಮುಚ್ಚುತ್ತಿದ್ದಾರೆ. ಆದ್ದರಿಂದ ಬಡವರು ತೊಂದರೆ ಅನುಭವಿಸಬೇಕಾಗಿದೆ. ಸೀಮೆ ಎಣ್ಣೆ ಸಹ ಕೆಲವರಿಗೆ ಮಾತ್ರ ವಿತರಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.

ಇದಲ್ಲದೆ ನ್ಯಾಯ ಬೆಲೆ ಅಂಗಡಿಯವರು ಕೆಲವೊಂದು ಸಾಮಗ್ರಿ ಗ್ರಾಹಕರಿಗೆ ಒತ್ತಾಯಪೂರ್ವಕ ಮಾರಾಟ ಮಾಡುತ್ತಿದ್ದಾರೆ ಎಂದಿದ್ದಾರೆ. ಈ ಸಂಬಂಧ ಇಲ್ಲಿನ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಅನೇಕ ಸಲ ವಿನಂತಿಸಿದರೂ ಪ್ರಯೋಜನ ಆಗಿಲ್ಲ.
 
ಈ ಅಧಿಕಾರಿಗಳ ಸಹ ವಿತರಕರಿಂದ ಹಣ ಪಡೆದು ಸುಮ್ಮನೆ ಕುಳಿತುಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಇಂಥ ವ್ಯವಸ್ಥೆಯಲ್ಲಿ ಸರಿಪಡಿಸಿ ಎಲ್ಲರಿಗೂ ಆಹಾರಧಾನ್ಯ ದೊರೆಯುವಂತೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಜಮಾತೆ ಇಸ್ಲಾಮಿ ಹಿಂದ್ ತಾಲ್ಲೂಕು ಅಧ್ಯಕ್ಷ ಜುಲ್ಫೇಕಾರ್ ಅಹ್ಮದ್, ಪ್ರಮುಖರಾದ ನೈಮುದ್ದೀನ್ ಚಾಬೂಕಸವಾರ, ಕರಾರ ಅಹ್ಮದ್, ಖಲೀಲ್ ಅಹ್ಮದ್, ಗುಲಾಮ ರಸೂಲ್, ಯಾಕೂಬ್ ಅಕ್ತರ್, ಬಿಲಾಲ್ ಅಹ್ಮದ್ ಮುಂತಾದವರು ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.