ADVERTISEMENT

ಪ್ರತಿಭೆ ಅರಳಲು ಪ್ರೋತ್ಸಾಹ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 6:05 IST
Last Updated 19 ನವೆಂಬರ್ 2012, 6:05 IST

ಭಾಲ್ಕಿ: ಇವತ್ತಿನ ವಿದ್ಯಾರ್ಥಿಗಳು ನಾಳಿನ ಭವಿಷ್ಯವಾಗಿದ್ದಾರೆ. ಅವರನ್ನು ನಾಡಿನ ಜ್ಞಾನ ಸಂಪನ್ಮೂಲದ ಖಣಿಗಳನ್ನಾಗಿಸಲು ಸಂಘ ಸಂಸ್ಥೆಗಳ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಪತ್ರಕರ್ತ ಪ್ರೊ. ಚಂದ್ರಕಾಂತ ಬಿರಾದಾರ ಅಭಿಪ್ರಾಯಪಟ್ಟರು.

ಭಾಲ್ಕಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ರೋಟರಿ ಕ್ಲಬ್‌ನಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ  ಆಯೋಜಿಸಿದ್ದ ತಾಲೂಕು ಮಟ್ಟದ ಕ್ವಿಜ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ನೂರಾರು ಸಂಘಟನೆಗಳಿದ್ದರೂ ಅನೇಕ ಪ್ರತಿಭೆಗಳು ಎಲೆ ಮರೆಯ ಕಾಯಿಯಂತೆ ಸೊರಗುತ್ತಿವೆ. ಭಾರತದ ಪ್ರತಿಭೆಗಳಿಗೆ ಅಮೇರಿಕಾದಂಥ ದೈತ್ಯ ರಾಷ್ಟ್ರ ಎಲ್ಲ ಸೌಲತ್ತುಗಳನ್ನು ನೀಡಿ ಉದ್ಯೋಗಾವಕಾಶ ನೀಡುತ್ತಿದೆ. ಆ ಮೂಲಕ ತನ್ನ ಆರ್ಥಿಕ ಸಂಪತ್ತು ಹೆಚ್ಚಿಸಿಕೊಳ್ಳುತ್ತಿದೆ.

ಆದರೆ ತಾಯ್ನಾಡಿನಲ್ಲೇ ಯುವ ಪ್ರತಿಭೆಗಳು ಸೂಕ್ತ ಮಾರ್ಗದರ್ಶನವಿಲ್ಲದೇ ಅವಕಾಶ ವಂಚಿತರಾಗುತ್ತಿರುವದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಬಿರಾದಾರ್ ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಉಮಾಕಾಂತ ವಾರದ್ ಮಾತನಾಡಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವದು, ಬಡವರನ್ನು ಗುರ್ತಿಸಿ ಸಹಾಯ ಮಾಡುವದು ರೋಟರಿಯ ಉದ್ದೇಶವಾಗಿದೆ ಎಂದರು. ಈಗಾಗಲೇ ಕ್ಲಬ್‌ನ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣೆ, ರಕ್ತದಾನ ಶಿಬಿರ, ಮನೊರಂಜನೆ ಜೊತೆಗೆ ಜ್ಞಾನ ತರಬೇತಿ ಶಿಬಿರಗಳನ್ನು ಹಮ್ಮಿಕೊಳದಳಲಾಗಿದೆ ಎಂದು ತಿಳಿಸಿದರು.

ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜದ ಪ್ರಜ್ಞಾವಂತರು ರೋಟರಿಯೊಂದಿಗೆ ಸ್ಪಂದಿಸುವ ಅಗತ್ಯವಿದೆ ಎಂದು ವ್ಯಾಪಾರಿ ಮುಖಂಡ ಪೂನಮ್‌ಚಂದ್ ತಿವಾರಿ ಅಭಿಪ್ರಾಯಪಟ್ಟರು.  ಕಾರ್ಯದರ್ಶಿ ನಿರಂಜನ ಅಷ್ಟೂರೆ, ನಿಕಟಪೂರ್ವ ಅಧ್ಯಕ್ಷ ಡಾ. ವಸಂತ ಪವಾರ, ಸಂಜೀವ ನಾಯಕ, ಡಾ. ಅಮಿತ್ ಅಷ್ಟೂರೆ, ಎಂ. ಸೋಮನಾಥ, ಡಾ. ನಿತಿನ್ ಪಾಟೀಲ, ಡಾ. ಧನರಾಜ ಹುಲಸೂರೆ, ಸದ್ಗುರು ವಿದ್ಯಾಲಯದ ರಾಜಕುಮಾರ ಮೇತ್ರೆ, ಗುರುಕುಲದ ಪತಂಗೆ, ದಿಲೀಪ ಘಂಟೆ, ಆನಂದ ಕಲ್ಯಾಣೆ ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.