ADVERTISEMENT

ಬಸವಕಲ್ಯಾಣ: ಜನರ ಪ್ರತಿಭಟನೆನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:22 IST
Last Updated 6 ಡಿಸೆಂಬರ್ 2012, 6:22 IST

ಬಸವಕಲ್ಯಾಣ: ಪಡಿತರ ಚೀಟಿ ವಿತರಣೆಯಲ್ಲಿ ಅನ್ಯಾಯ ಆಗಿದೆ ಎಂದು ದೂರಿ ವಿವಿಧೆಡೆಯಿಂದ ಆಗಮಿಸಿದ್ದ ಜನರು ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಕೆಲಕಾಲ ಧರಣಿ ನಡೆಸಿ ಪ್ರತಿಭಟಿಸಿದರು.

ಬೆಳಿಗ್ಗೆಯೇ ಇಲ್ಲಿಗೆ ಆಗಮಿಸಿದ್ದ ಜನರು ಮೊದಲು ತಮಗೆ ಬಿಪಿಎಲ್ ಚೀಟಿ ಕೊಡಲಾಗಿತ್ತು. ಆದರೆ ಈಚೆಗೆ ಎಪಿಎಲ್ ಚೀಟಿ ಕೊಟ್ಟು ಅನ್ಯಾಯ ಮಾಡಲಾಗಿದೆ. ತಮಗೆ ಹೊಲ ಇಲ್ಲ, ಮನೆ ಇಲ್ಲ ಆದರೂ ಇಂಥ ಚೀಟಿ ಕೊಟ್ಟಿದ್ದಾರೆ ಎಂದು ಕೆಲವರು ದೂರಿದರು.

ಮಹಡಿ ಮನೆಯವರಿಗೆ ಬಿಪಿಎಲ್ ಚೀಟಿ ಕೊಟ್ಟಿದ್ದಾರೆ. ಹಣ ಪಡೆದುಕೊಂಡು ಈ ರೀತಿ ಅವ್ಯವಹಾರ ನಡೆಸಲಾಗಿದೆ ಎಂದು ಕೆಲವರು ಆರೋಪಿಸಿದರು. ಪಡಿತರ ಚೀಟಿ ವಿತರಣೆಯಲ್ಲಿ ತಾರತಮ್ಯ ಆಗಿದ್ದರಿಂದ ಹಲವಾರು ಜನರು ತೊಂದರೆ ಅನುಭವಿಸಬೇಕಾಗಿದ್ದು ಈ ಬಗ್ಗೆ ಹೇಳಲು ಹೋದರೆ ಯಾರೂ ಕೇಳುತ್ತಿಲ್ಲ ಎಂದು ಸ್ಥಳದಲ್ಲಿ ಹಾಜರಿದ್ದ ಕೂಲಿ ಕಾರ್ಮಿಕ ಹೋರಾಟ ಸಮಿತಿ ಅಧ್ಯಕ್ಷ ಮಾಣಿಕಪ್ಪ ಮೇಟಿಕಾರ್ ತಿಳಿಸಿದರು.

ಮೆಲಾಧಿಕಾರಿಗಳು ಈ ಬಗ್ಗೆ ಲಕ್ಷ ಹರಿಸಿ ಬಡವರ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಶಿವರಾಜ ಜಮಾದಾರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಶಿವರಾಜ ಹಲಬರ್ಗೆ ಅವರು ಪಡಿತರ ಚೀಟಿ ಕೊಡುವ ಸಂಬಂಧ ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ತುಂಬಿಕೊಳ್ಳಲಾಗಿದ್ದು ಅಲ್ಲಿಯೇ ಲೋಪದೋಷವಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ಕೊಟ್ಟರು.

ಈ ಸಂದರ್ಭದಲ್ಲಿ ಪಡಿತರ ವಿತರಣೆಯಲ್ಲಿನ ಲೋಪದೋಷಗಳ ಬಗ್ಗೆ ತಹಸೀಲ್ದಾರ ಕಚೇರಿ ಸಭಾಂಗಣದಲ್ಲಿ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕರೆದಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗುಂಡುರೆಡ್ಡಿ ಸಹ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಆಲಿಸಿದರು. ಜನರ ಸಮಸ್ಯೆ ಶೀಘ್ರ ಬಗೆಹರಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.