ADVERTISEMENT

ಬಿಎಸ್‌ಎಸ್‌ಕೆಯಲ್ಲಿ ಸರ್ವಾಧಿಕಾರಿ ವರ್ತನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 7:30 IST
Last Updated 14 ಫೆಬ್ರುವರಿ 2011, 7:30 IST

ಬೀದರ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ (ಬಿಎಸ್‌ಎಸ್‌ಕೆ) ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸರ್ವಾಧಿಕಾರಿಗಳಂತೆ ವರ್ತಿಸಿ ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಆಡಳಿತ ಮಂಡಳಿಯ ನಿರ್ದೇಶಕ ಸಂಜಯ್ ಖೇಣಿ ಭಾನುವಾರ ಆರೋಪಿಸಿದರು.ಅವರ ಜೊತೆ ಉಳಿದ ನಿರ್ದೇಶಕರಾದ ಅಶೋಕ ತಮಸಂಗೆ, ಸಂಗಮೇಶ ಪಾಟೀಲ್, ಸುಭಾಷ ಕಾಶೆಂಪೂರ್ ಹಾಗೂ ದತ್ತಾತ್ರಿ ದಾಚೆಪಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಖಾನೆಯ ಅಧ್ಯಕ್ಷ- ಉಪಾಧ್ಯಕ್ಷರ ವಿರುದ್ಧ ಹರಿಹಾಯ್ದರು.

ಕಬ್ಬು ಕಟಾವು ಮಾಡಲು 222 ಲಾರಿ ಮತ್ತು 703 ಎತ್ತಿನ ಬಂಡಿ ಗ್ಯಾಂಗ್‌ಗಳಿಗೆ ಸುಮಾರು 8.30 ಕೋಟಿ ರೂಪಾಯಿ ಮುಂಗಡ ಹಣ ನೀಡಲಾಗಿತ್ತು. ಇದರಲ್ಲಿ  78 ಲಾರಿ ಮತ್ತು 203 ಎತ್ತಿನ ಬಂಡಿಗಳ ಗ್ಯಾಂಗ್ ಬಂದಿರುವುದಿಲ್ಲ. ಪ್ರತಿ ಲಾರಿಯ ಗ್ಯಾಂಗ್‌ಗೆ ಮೂರು ಲಕ್ಷ ಹಾಗೂ ಪ್ರತಿ ಎತ್ತಿನ ಗಾಡಿ ಗ್ಯಾಂಗ್‌ಗೆ 30 ಸಾವಿರ ರೂಪಾಯಿ ಪಾವತಿಸಿರುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಒಟ್ಟು ಮೂರು ಕೋಟಿ ರೂಪಾಯಿ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಒಪ್ಪಂದದಂತೆ ಗ್ಯಾಂಗ್‌ಗಳು ಬರಬೇಕು ಇಲ್ಲವೇ ಮೂರು ಕೋಟಿ ರೂಪಾಯಿ ಹಿಂತಿರುಗಿ ಪಡೆಯಬೇಕು ಎಂದು ಅವರು ಆಗ್ರಹಿಸಿದರು. ಇದಾಗದಿದ್ದರೆ ಅಧ್ಯಕ್ಷರ ವಿರುದ್ಧ ಯಾಕೆ ಕ್ರಿಮಿನಲ್ ಮೊಕದ್ದಮೆ ಹೂಡಬಾರದು ಎಂದು ಪ್ರಶ್ನಿಸಿದರು.

ಫೆಬ್ರುವರಿ 7ರಂದು ಪ್ರತಿಭಟನೆ ನಡೆಸಿ ಕ್ರಶಿಂಗ್ ನಿಲ್ಲಿಸಲಾಗಿತ್ತು. ಅದಕ್ಕೆ ಅಧ್ಯಕ್ಷರು ತಡವಾಗಿ ಬಂದದ್ದು ಕಾರಣ. ಮಧ್ಯಾಹ್ನವೇ ಅಧ್ಯಕ್ಷರು ಪ್ರತಿಭಟನೆ ನಿರತರಿಗೆ ಭರವಸೆ ನೀಡಿದ್ದರೆ ಕಾರ್ಖಾನೆಗೆ ಆಗುತ್ತಿದ್ದ ನಷ್ಟ ತಪ್ಪಿಸಬಹುದಿತ್ತು. ಕಾರ್ಖಾನೆಗೆ ಆದ ನಷ್ಟಕ್ಕೆ ಅಧ್ಯಕ್ಷರೇ ಹೊಣೆ ಎಂದು ಅವರು ದೂರಿದರು.ಕಾರ್ಖಾನೆಯು ಪ್ರಸಕ್ತ ಸಾಲಿನಲ್ಲಿ ಕ್ರಶಿಂಗ್ ಆರಂಭಿಸಿದಾಗಿನಿಂದ (ಕಳೆದ 90 ದಿನಗಳಲ್ಲಿ) 4.32 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಬೇಕಾಗಿತ್ತು. ಆದರೆ, ಇದುವರೆಗೆ ಕೇವಲ 2.93 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಅಧ್ಯಕ್ಷರ ಹೇಳಿಕೆಯ ಪ್ರಕಾರ ಲೆಕ್ಕ ಮಾಡಿದರೆ ಸುಮಾರು 12 ಕೋಟಿ ರೂಪಾಯಿ ಕಾರ್ಖಾನೆಗೆ ನಷ್ಟ ಆದಂತಾಗಿದೆ. ಅಧ್ಯಕ್ಷರು ನೈತಿಕ ಹೊಣೆ ಹೊತ್ತು 12 ಕೋಟಿ ರೂಪಾಯಿಗಳನ್ನು ಕಾರ್ಖಾನೆಗೆ ಭರಿಸಬೇಕು ಎಂದು ಆಗ್ರಹಿಸಿದರು.

2010ರ ಜುಲೈ 10ರಂದು ಟೆಂಡರ್ ಕರೆಯದೇ ಕಾನೂನು ಬಾಹಿರವಾಗಿ (ನಿರ್ದೇಶಕರ ಗಮನಕ್ಕೆ ತಾರದೇ) 16ಸಾವಿರ ಚೀಲ ಸಕ್ಕರೆ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ. ಪ್ರತಿ ಚೀಲಕ್ಕೆ ರೂ 200ರಂತೆ ಒಟ್ಟು 32 ಲಕ್ಷ ರೂಪಾಯಿ ಕಾರ್ಖಾನೆ ಹಾನಿ ಉಂಟಾಗಿದೆ. ಇದಕ್ಕೆ ಅಧ್ಯಕ್ಷ ಸುಭಾಷ ಕಲೂರ್ಲು ಮತ್ತು ಉಪಾಧ್ಯಕ್ಷ ಮಾರುತಿ ಮುಳೆ ಅವರೇ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.