ADVERTISEMENT

ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 5:50 IST
Last Updated 29 ಏಪ್ರಿಲ್ 2018, 5:50 IST

ಬೀದರ್: ‘ಕಾಂಗ್ರೆಸ್‌ ಸೋಲಿಸಲು ಬಿಜೆಪಿ ಹಾಗೂ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ. ಆದರೆ ಯಾವ ಕಾರಣಕ್ಕೂ ಕಾಂಗ್ರೆಸ್‌ನ್ನು ಸೋಲಿಸಲು ಆಗದು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ’ ಎಂದು ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಹೇಳಿದರು.

‘ಬಿಜೆಪಿ ಸರ್ಕಾರ ಈಗಾಗಲೇ ಇತಿಹಾಸ ಸೇರಿದೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಯಾವ ಸಮೀಕ್ಷೆಯೂ ಹೇಳಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ನಂಬಿಕೊಂಡು ರಾಜ್ಯದ ಬಿಜೆಪಿ ಮುಖಂಡರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಲೇವಡಿ ಮಾಡಿದರು.

‘ರಾಜ್ಯದಲ್ಲಿ ಅಮಿತ್‌ ಶಾ ಮತದಾರರ ಮೇಲೆ ಮೋಡಿ ಮಾಡಲಿದ್ದಾರೆ ಎನ್ನುವ ಭ್ರಮೆ ಬಿಜೆಪಿ ಮುಖಂಡರಿಗೆ ಇದೆ. ರಾಜ್ಯದಲ್ಲಿ ಬಿಜೆಪಿ ನಾಯಕರ ಸ್ಥಿತಿ ಪಾಪ ಪಾಂಡುವಿನಂತೆ ಆಗಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಭ್ರಷ್ಟ ಆಡಳಿತ ನೀಡಿದೆ ಎಂದು ಅಮಿತ್‌ ಶಾ ಬಹಿರಂಗವಾಗಿಯೇ ಹೇಳಿದ್ದಾರೆ. ಕಾಂಗ್ರೆಸ್‌ ತನ್ನ ಅಧಿಕಾರಾವಧಿಯಲ್ಲಿ ಈಡೇರಿಸಿದ ಆಶ್ವಾಸನೆ ಹಾಗೂ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಮತದಾರರು ಕಾಂಗ್ರೆಸ್ಗೆಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿಗೆ ಕಾಂಗ್ರೆಸ್‌ ವಿರುದ್ಧ ಮಾತನಾಡಲು ವಿಷಯವೇ ಇಲ್ಲ. ಜೈಲಿಗೆ ಹೋದವರನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ಹೇಳಿದವರೇ ಈಗ ಅವರ ಕಾಲಿಗೆ ಬೀಳುತ್ತಿದ್ದಾರೆ’ ಎಂದು ಟೀಕಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಓಬೆದುಲ್ಲಾ ಷರೀಫ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಡೇವಿಡ್‌ ಸಿಮಿಯೊನ್, ರಾಜಶೇಖರ ಪಾಟೀಲ ಅಷ್ಟೂರ್, ಸಂಜಯ ಜಾಗೀರ ದಾರ್‌, ರಫತ್ ಮತಿನ್, ಚಂದ್ರಕಾಂತ ಹಿಪ್ಪಳಗಾಂವ್‌ ಇದ್ದರು.

ಜಿಲ್ಲೆಗೆ ರಾಹುಲ್, ಪ್ರಿಯಾಂಕಾ ವಾದ್ರಾ

ಬೀದರ್‌: ‘ಎಐಸಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ ಯಾದವ ಅವರು ಮೇ ಮೊದಲ ವಾರದಲ್ಲಿ ಚುನಾವಣಾ ಪ್ರಚಾರಕ್ಕೆ ಜಿಲ್ಲೆಗೆ ಬರಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ತಿಳಿಸಿದರು.

‘ರಾಹುಲ್‌ ಗಾಂಧಿ ಅವರು ಮೇ 3 ರಂದು ಬೆಳಿಗ್ಗೆ ಕಲಬುರ್ಗಿ ಜಿಲ್ಲೆಯ ಕಾಳಗಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ 12.30ಕ್ಕೆ ಹುಮನಾಬಾದ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಭಾಲ್ಕಿ, ಔರಾದ್ ಹಾಗೂ ಬೀದರ್‌ನಲ್ಲಿ ಆಯೋಜಿಸಿರುವ ಚುನಾವಣಾ ಪ್ರಚಾರ ಸಭೆಗಳಲ್ಲೂ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದರು.

‘ಪ್ರಿಯಂಕಾ ವಾದ್ರಾ ಅವರೂ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಪ್ರಿಯಂಕಾ ಹಾಗೂ ಅಖಿಲೇಶ ಯಾದವ ಅವರ ಕಾರ್ಯಕ್ರಮದ ವಿವರವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು’ ಎಂದು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.