ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದದ್ದು ಸ್ವಂತ ವರ್ಚಸ್ಸಿನಿಂದಲ್ಲ: ಶ್ರುತಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:16 IST
Last Updated 10 ಏಪ್ರಿಲ್ 2013, 6:16 IST

ಬೀದರ್: ಕಳೆದ ಚುನಾವಣೆಯಲ್ಲಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪ್ರಭಾವದಿಂದಾಗಿ ಅಧಿಕಾರಕ್ಕೆ ಬಂದಿದೆಯೇ ಹೊರತು ಸ್ವಂತ ವರ್ಚಸ್ಸಿನಿಂದಲ್ಲ ಎಂದು ಕೆಜೆಪಿ ರಾಜ್ಯ ಉಪಾಧ್ಯಕ್ಷೆಯೂ ಆದ ಚಿತ್ರನಟಿ ಶ್ರುತಿ ಹೇಳಿದರು.

ನಗರದ ಜಿಲ್ಲಾ ಕೆಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಯಡಿಯೂರಪ್ಪ ಪಕ್ಷ ತೊರೆದ ಮೇಲೆ ಬಿಜೆಪಿ ಬೆಳಕಿನಿಂದ ಕತ್ತಲೆಗೆ ಜಾರಿದೆ ಎಂದು ಟೀಕಿಸಿದರು. 

ಕೆಜೆಪಿ ಸುಳ್ಳು ಆಶ್ವಾಸನೆ, ಭರವಸೆಗಳ ಪ್ರಣಾಳಿಕೆ ನೀಡುವ ಪಕ್ಷ ಅಲ್ಲ. ನಮ್ಮದು ನೀಡಿದ ಭರವಸೆಯನ್ನು ಈಡೇರಿಸುವ ಪಕ್ಷ ಎಂದರು.

ಬೇರೆ ಪಕ್ಷಗಳ ವೈಫಲ್ಯ, ಗೊಂದಲಗಳ ಬಗೆಗೆ ಚರ್ಚೆ ಬೇಡ. ಯಡಿಯೂರಪ್ಪನವರ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕು ಎಂದು ಸಲಹೆ ಮಾಡಿದರು.

ಕೆಜೆಪಿ ಉದಯವಾದ ನಂತರ ಬಿಜೆಪಿ ಬರಿದಾಗುತ್ತಿದೆ. ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಕುರ್ಚಿಗಳು ಖಾಲಿ ಖಾಲಿ ಆಗಿರುವುದನ್ನು ಕಂಡು ಆ ಪಕ್ಷದ ಮುಖಂಡರು ಸೋಲಿನ ಭೀತಿಯಲ್ಲಿದ್ದಾರೆ ಎಂದು ಕೆಜೆಪಿ ಯುವ ಘಟಕದ ರಾಜ್ಯ ಅಧ್ಯಕ್ಷ ಜಗದೀಶ್ ಹಿರೇಮನಿ ಲೇವಡಿ ಮಾಡಿದರು.

ಯಡಿಯೂರಪ್ಪ ಅವರು ಯುವಕರು, ಜನಸಾಮಾನ್ಯರಿಗಾಗಿ ಪ್ರಾದೇಶಿಕ ಪಕ್ಷ ಕಟ್ಟಿದ್ದಾರೆ. ಕೆಜೆಪಿ ಶಕ್ತಿ ಏನು ಎನ್ನುವುದು ಬರುವ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಯಡಿಯೂರಪ್ಪನವರು ರಾಜ್ಯದ ಜನತೆ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಪಕ್ಷ ಕಟ್ಟಿದ್ದಾರೆ. ಈ ಪಕ್ಷಕ್ಕೆ ಜನತೆಯೇ ಜೀವಾಳ, ಯುವಕರೇ ಆಧಾರವಾಗಿದ್ದಾರೆ ಎಂದು ಬೀದರ್ ಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ನುಡಿದರು.

ಕೆಜೆಪಿಯತ್ತ ಯುವಕರ ದಂಡು ಬರುತ್ತಿದೆ. ಪಕ್ಷದ ಕಾರ್ಯಕರ್ತರು ಬರುವ ಚುನಾವಣೆಯಲ್ಲಿ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಪಕ್ಷದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಕಣಜಿ, ಯುವ ಘಟಕದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಎಸ್. ಪಾಟೀಲ್ ಗಾದಗಿ, ಪ್ರಮುಖರಾದ ಅನೀಲಕುಮಾರ್ ಬೆಲ್ದಾರ್, ಝರೆಪ್ಪ ಮಮದಾಪುರೆ, ಬಸವರಾಜ ರಾಜೋಳೆ, ಶಶಿಕುಮಾರ್ ಪಾಟೀಲ್ ಸಂಗಮ್, ಅಶೋಕಕುಮಾರ್ ಕರಂಜಿ, ಸಂಗಮೇಶ್ ನಾಶೀಗಾರ್, ಜಗದೀಶ್ ಬಿರಾದಾರ್, ವಿಜಯಲಕ್ಷ್ಮಿ ಲಾಹೋರಕರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.