ADVERTISEMENT

ಬೀದರ್‌: ದೂಳಿನಿಂದ ಸಿಗದ ‘ಮುಕ್ತಿ’

​ಪ್ರಜಾವಾಣಿ ವಾರ್ತೆ
Published 20 ಮೇ 2014, 10:58 IST
Last Updated 20 ಮೇ 2014, 10:58 IST
ರಸ್ತೆ ಡಾಂಬರೀಕರಣ ಕಾಮಗಾರಿ ವಿಳಂಬದ ಬೀದರ್‌ನ ನಗರದ ರಾಂಪುರೆ ಕಾಲೊನಿ ಮುಖ್ಯ ರಸ್ತೆಯ ಸ್ಥಿತಿ
ರಸ್ತೆ ಡಾಂಬರೀಕರಣ ಕಾಮಗಾರಿ ವಿಳಂಬದ ಬೀದರ್‌ನ ನಗರದ ರಾಂಪುರೆ ಕಾಲೊನಿ ಮುಖ್ಯ ರಸ್ತೆಯ ಸ್ಥಿತಿ   

ಬೀದರ್: ಇಲ್ಲಿನ ನಗರಸಭೆಯ ವಾರ್ಡ್‌ ಸಂಖ್ಯೆ 27, 28, 29 ಮತ್ತು 30ರ ವ್ಯಾಪ್ತಿಯ ಕಾಲೊನಿಗಳಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ವಿಳಂಬ­ವಾಗುತ್ತಿರುವ ಕಾರಣ ನಾಗರಿಕರನ್ನು  ದೂಳಿನ ಸಮಸ್ಯೆ ಕಾಡುತ್ತಿದೆ.

ನಗರದ ರಾಂಪುರೆ ಕಾಲೊನಿ, ಬ್ಯಾಂಕ್‌ ಕಾಲೊನಿ, ಅಲ್ಲಮಪ್ರಭು ನಗರ ಹಾಗೂ ಕೈಲಾಸ ನಗರ ಸೇರಿದಂತೆ ವಿವಿಧ ಕಾಲೊನಿಗಳ ಮುಖ್ಯ ರಸ್ತೆಯಲ್ಲಿ ಓಡಾಡುವ ಜನರಿಗೆ ನಿತ್ಯ ದೂಳಿನ ಸ್ನಾನ ಆಗುತ್ತಿದೆ.

ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು ಚುನಾವಣೆಯ ನೀತಿ ಸಂಹಿತೆ ಜಾರಿಗೆ ಮುನ್ನಾ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ರಸ್ತೆ ನಿರ್ಮಾಣಕ್ಕಾಗಿ ಕೆಂಪು ಮಣ್ಣು ಹಾಕಲಾಗಿದೆ. ಆದರೆ ನಂತರದ ಕಾಮಗಾರಿ ನಡೆಯಲಿಲ್ಲ. ಡಾಂಬರೀಕರಣ ಕಾಮಗಾರಿ ನಿರೀಕ್ಷಿಸಿದ್ದ ನಾಗರಿಕರು ನಿತ್ಯ ದೂಳಿನಲ್ಲಿ ಓಡಾಡುವಂತಾಗಿದೆ.

ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಅನುದಾನ ಇದ್ದರೂ ಕಾಮಗಾರಿ ವಿಳಂಬ ಮಾಡಲಾಗುತ್ತಿದೆ ಎನ್ನುತ್ತಾರೆ ನಗರಸಭೆ ಸದಸ್ಯ ನಾಗಶೆಟ್ಟಿ ವಾಗದಾಳೆ.

ರಾಂಪುರೆ, ಬ್ಯಾಂಕ್‌ ಕಾಲೊನಿ, ಅಲ್ಲಮಪ್ರಭು ಹಾಗೂ ಕೈಲಾಸ ನಗರದ ಮುಖ್ಯ ರಸ್ತೆಗಳಲ್ಲಿ ಕೆಂಪು ಮಣ್ಣು ಹಾಕಲಾಗಿದೆ.  ಗುತ್ತಿಗೆದಾರರಿಂದ ವಿಳಂಬವಾಗಿದೆ. ಸಂಬಂಧಿತ ಅಧಿಕಾರಿಗಳ ಗಮನ ಸೆಳೆದರೂ ಮುಕ್ತಿ ದೊರೆಯುತ್ತಿಲ್ಲ ಎಂದು ಅವರು ಹೇಳುತ್ತಾರೆ.
ಒಂದು ವಾರದ ಒಳಗೆ ಕಾಮಗಾರಿಗೆ ಆರಂಭಿಸದಿದ್ದಲ್ಲಿ ಕಾಲೊನಿಯ ನಿವಾಸಿಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದರ ಬಗೆಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.