ADVERTISEMENT

ಬೀದರ್ ಉತ್ಸವ: ಮಕ್ಕಳಿಗೆ ಕಿಡ್ ಜೋನ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 7:10 IST
Last Updated 11 ಫೆಬ್ರುವರಿ 2011, 7:10 IST

ಬೀದರ್: ಫೆಬ್ರುವರಿ 18ರಿಂದ ಮೂರು ದಿನಗಳ ಕಾಲ ನಡೆಯಲಿರುವ ಬೀದರ್ ಉತ್ಸವದಲ್ಲಿ ಮಕ್ಕಳ ಮನೋರಂಜನೆಗಾಗಿ ಹಲವಾರು ಕಾರ್ಯಕ್ರಮಗಳ ವ್ಯವಸ್ಥೆ ಕಲ್ಪಿಸಲಾಗಿದೆಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ತಿಳಿಸಿದರು.

ನಗರದ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಬೀದರ್ ಉತ್ಸವದ “ಕಿಡ್ ಜೋನ್’ ಕೂಪನ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಬಾರಿಯ ಬೀದರ್ ಉತ್ಸವದ ಸಂದರ್ಭದಲ್ಲಿ ಮಕ್ಕಳಿಗಾಗಿ 20 ವಿವಿಧ ಆಟಗಳ ಕಿಡ್ ಜೋನ್ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. 50 ರೂಪಾಯಿ ಮೌಲ್ಯದ ಕೂಪನ್ ಪಡೆದುಕೊಂಡು ಮಕ್ಕಳು ಎಲ್ಲ ಆಟಗಳನ್ನು ಆಡುವ ಅವಕಾಶ ಕಲ್ಪಿಸಲಾಗಿದೆ. ಬೀದರ್ ಕೋಟೆ ಆವರಣದಲ್ಲಿ ಮೂರು ದಿನಗಳ ಕಾಲ ಮಕ್ಕಳು ಇದರ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.

ಮಕ್ಕಳಿಗಾಗಿ ಆರ್ಚರಿ, ನೆಟ್ ಕ್ರಿಕೆಟ್, ಗೂಳಿ ಆಟ, ಬಾಸ್ಕೆಟ್ ಬಾಲ್, ಮಿನಿ ಗಾಲ್ಫ್, ಸಾಕರ್, ಟಾಟ್ಟೂ, ಫೇಸ್ ಪೈಂಟಿಂಗ್‌ನಂಥ ವೈಧ್ಯಮಯ ಆಟಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಕಿಡ್ ಜೋನ್ ಒಳಗೊಂಡಿದೆ ಎಂದು ಮನಪ್ರೀತ್‌ಸಿಂಗ್ ಖನೋಜಾ ಮಾಹಿತಿ ನೀಡಿದರು.

ಶಾಸಕ ರಹೀಮ್‌ಖಾನ್ ಮಾತನಾಡಿ, ಬೀದರ್ ಉತ್ಸವ ಸಂದರ್ಭದಲ್ಲಿ ಮಕ್ಕಳಿಗೆ ಭರಪೂರ್ ಮನೋರಂಜನೆ ಒದಗಿಸುವ ನಿಟ್ಟಿನಲ್ಲಿ ಈ ಬಾರಿ ಕಿಡ್ ಜೋನ್‌ನಂಥ ವಿಶೇಷ ಪ್ಯಾಕೇಜ್ ಸಿದ್ಧಪಡಿಸಲಾಗಿದ್ದು, ಜಿಲ್ಲೆಯ ಎಲ್ಲ ಮಕ್ಕಳು ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಬೀದರ್ ಉತ್ಸವ ಸಮಿತಿಯ ಪದಾಧಿಕಾರಿ ಬಾಬುವಾಲಿ, ಶಾಹೀನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಅವರು ನಗರದ ಮಿಲೇನಿಯಂ ಶಿಕ್ಷಣ ಸಂಸ್ಥೆ ಹಾಗೂ ಗುರುನಾನಕ್ ಶಿಕ್ಷಣ ಸಂಸ್ಥೆಯಲ್ಲಿ ಸಹ ಕಿಡ್ ಜೋನ್ ಕೂಪನ್ ವಿತರಿಸಿ ಮಕ್ಕಳು ಬೀದರ ಉತ್ಸವದಲ್ಲಿ ಮೂರು ದಿನಗಳ ಕಾಲ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಕೋರಿದರು.

ಸಾಹಸ ಕ್ರೀಡೆಗಳು: ಬೀದರ್ ಉತ್ಸವದಲ್ಲಿ ಸಾಹಸ ಪ್ರೇಮಿಗಳಿಗೆ ಈ ಬಾರಿ ಹಲವು ಸಾಹಸ ಕ್ರೀಡೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಬಹುತೇಕ ಸಾಹಸ ಕ್ರೀಡೆಗಳು ಚಾಂದಿನಿ ಚಬೂತರ ಮುಂಭಾಗದಲ್ಲಿ ನಡೆಯಲಿದೆ. ಮುಖ್ಯ ವೇದಿಕೆಯ ಎದುರುಗಡೆ ಹಾಟ್ ಏರ್ ಬಲೂನ್ ಸಾಹಸಿಗರಿಗೆ ಹೊಸ ಅನುಭವ ನೀಡಲಿದೆ.

ಇನ್ನುಳಿದಂತೆ ಬರ್ಮಾ ಬ್ರಿಡ್ಜ್, ಕಮಾಂಡೊ ನೆಟ್, ಬರ್ಮಾ ರೋಪ್, ಜೋರ್ಬಿಂಗ್ ಬಾಲ್, ಪಾರಾಸೈಲಿಂಗ್ ಸೇರಿದಂತೆ ಹಲವು ಕ್ರೀಡೆಗಳನ್ನು ಆಯೋಜಿಸಲಾಗುವುದು. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.