ADVERTISEMENT

ಬೀದರ್‌ ಜಿಲ್ಲೆಗೆ 33ನೇ ಸ್ಥಾನ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಒಂದು ಸ್ಥಾನ ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2018, 9:30 IST
Last Updated 8 ಮೇ 2018, 9:30 IST

ಬೀದರ್: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೀದರ್‌ ಜಿಲ್ಲೆ ನಿರೀಕ್ಷಿತ ಪ್ರಗತಿ ಕಾಣದಿದ್ದರೂ ಒಂದು ಸ್ಥಾನ ಮೇಲಕ್ಕೆ ಏರಿದೆ. ಕಳೆದ ವರ್ಷ 34ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 33ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಕುಸಿದಿದೆ.

ಕಳೆದ ಬಾರಿ ಶೇ 62.02ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ ಇನ್ನೂ ಕಡಿಮೆ ಅಂದರೆ ಶೇ 60.71ರಷ್ಟು ಫಲಿತಾಂಶ ಬಂದಿದೆ. 2016ರಲ್ಲಿ ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದಾಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕನಿಷ್ಠ 20ನೇ ಸ್ಥಾನದೊಳಗೆ ಗುರುತಿಸಿಕೊಳ್ಳುವಂತೆ ಮಾಡಲು ಯೋಜನೆ ರೂಪಿಸಿದ್ದರು. ಆದರೆ,ಪರಿಶ್ರಮ ಫಲ ನೀಡದೆ 2017 ರಲ್ಲಿ ಕೊನೆಯ ಸ್ಥಾನ ಪಡೆದು ಆಘಾತ ಉಂಟು ಮಾಡಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ‘10ರ ಹತ್ತಿರ’ ಘೋಷ ವಾಕ್ಯದೊಂದಿಗೆ ಅನೇಕ ಕಾರ್ಯಾಗಾರಗಳನ್ನು ಆಯೋಜಿಸಿದರು. ಆದರೆ, ಬೀದರ್‌ ಜಿಲ್ಲೆ ಹತ್ತರ ಹತ್ತಿರ ಇರಲಿ 30ರ ಸುತ್ತ ಗಿರಿಕಿ ಹೊಡೆಯುತ್ತಿದೆ.

‘2011 ರಿಂದ 2014ರ ವರೆಗೂ ಕಟ್ಟ ಕಡೆಯ ಸ್ಥಾನ ಪಡೆದಿದ್ದ ಬೀದರ್ ಜಿಲ್ಲೆ 2015ರಲ್ಲಿ 28ನೇ ಹಾಗೂ 2016ರಲ್ಲಿ 25ನೇ ಸ್ಥಾನ ಪಡೆದು ಕೊನೆಯ ಸ್ಥಾನ ಕಳಚಿಕೊಂಡಿತ್ತು. ಆದರೆ, 2017ರಲ್ಲಿ ಮತ್ತೆ ಕೊನೆಯ ಸ್ಥಾನದಲ್ಲಿ ಗುರುತಿಸಿಕೊಂಡು ತಲೆ ತಗ್ಗಿಸುವಂತಾಗಿತ್ತು. ಈ ಬಾರಿ ಒಂದು ಸ್ಥಾನ ಮೇಲಕ್ಕೆ ಏರಿದ್ದನ್ನು ಬಿಟ್ಟರೆ ಬೇರೆನೂ ಪ್ರಗತಿ ಕಂಡು ಬಂದಿಲ್ಲ.

ADVERTISEMENT

‘ಕಳೆದ ವರ್ಷ 85 ಶಿಕ್ಷಕರ ಹುದ್ದೆಗಳು ಖಾಲಿ ಇದ್ದವು. ಕೊನೆಯ ಹಂತದಲ್ಲಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಯಿತು. ಆರ್‌್ಎಂಎಸ್‌ ಶಾಲೆಗೆ ಶಿಕ್ಷಕರ ಹುದ್ದೆಗಳೇ ಮಂಜೂರು ಆಗಿಲ್ಲ. ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವುದು ಕಂಡು ಬಂದಿದೆ. ಈ ಎಲ್ಲ ಅಂಶಗಳು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಇನಾಯತ್‌ಅಲಿ ಶಿಂದೆ ಹೇಳುತ್ತಾರೆ.

‘ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಬಾರಿ ಕಡಿಮೆ ಇತ್ತು. ಈ ಬಾರಿಯ ನಿಖರ ಫಲಿತಾಂಶ ಇನ್ನೂ ಕಚೇರಿಗೆ ಬಂದಿಲ್ಲ. ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಪ್ರಮಾಣ ಉತ್ತಮವಾಗಿದೆ’ ಎಂದು ಹೇಳುತ್ತಾರೆ.

**
ರಾಜ್ಯದ ಜಿಲ್ಲೆಗಳ ಪೈಕಿ ಬೀದರ್‌ 33ನೇ ಸ್ಥಾನದಲ್ಲಿ ಇರಬಹುದು. ಆದರೆ, ವಿದ್ಯಾರ್ಥಿಗಳು ಗುಣಮಟ್ಟದ ಫಲಿತಾಂಶ ಪಡೆದಿದ್ದಾರೆ
ಇನಾಯತ್‌ ಅಲಿ ಶಿಂಧೆ, ಪ್ರಭಾರ ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.