ADVERTISEMENT

ಬೀದರ್: ವಿವಿಧೆಡೆ ನೀರಿಗೆ ಪರದಾಟ

ಪ್ರಜಾವಾಣಿ ವಿಶೇಷ
Published 3 ಮೇ 2012, 6:35 IST
Last Updated 3 ಮೇ 2012, 6:35 IST
ಬೀದರ್: ವಿವಿಧೆಡೆ ನೀರಿಗೆ ಪರದಾಟ
ಬೀದರ್: ವಿವಿಧೆಡೆ ನೀರಿಗೆ ಪರದಾಟ   

ಬೀದರ್: ಅಂತರ್ಜಲ ಕುಸಿತ ಹಾಗೂ ಬೋರ್‌ವೆಲ್‌ಗಳು ಕೈಕೊಟ್ಟಿದ್ದರಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಬೇಸಿಗೆ ಬಂತೆಂದರೆ ಸಾಕು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯ. ಬರ ಪರಿ ಸ್ಥಿತಿಯ ಹಿನ್ನೆಲೆಯಲ್ಲಿ ಈ ಬಾರಿ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಈಗಾಗಲೇ ಅನೇಕ ಸಭೆಗಳನ್ನು ನಡೆಸಲಾಗಿದೆ. ಅದಾಗಿಯು ಅನೇಕ ಗ್ರಾಮಗಳ ಜನರ ನೀರಿನ ದಾಹ ತೀರಿಲ್ಲ. ಬೀದರ್ ತಾಲ್ಲೂಕಿನ ಸಾಂಗ್ವಿ, ಸಿದ್ಧಾಪುರ, ಜನವಾಡ, ಔರಾದ್ ತಾಲ್ಲೂಕಿನ ಚಿಂತಾಕಿ, ಕರಂಜಿ, ಮಾನೂರು, ಚಿಕ್ಲಿ (ಯು) ಹಂಗರಗಾ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಮತ್ತಿತರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ.

ಸುಡುವ ಬಿಸಿಲಲ್ಲಿ ಜನ ತಲೆ ಮೇಲೆ ಕೊಡ ಹೊತ್ತುಕೊಂಡು ನೀರಿಗಾಗಿ ಓಡಾಡುವ ಸ್ಥಿತಿ ಉಂಟಾಗಿದೆ ಎಂದು ತಿಳಿಸುತ್ತಾರೆ ನಾಗರಿಕರು. ವಿದ್ಯುತ್ ಕೊರತೆ, ದುರಸ್ತಿಯಾಗದ ಪೈಪ್‌ಲೈನ್, ಆಳಕ್ಕೆ ಕುಸಿದ ಅಂತರ್ಜಲ ಸಮಸ್ಯೆ ಹೆಚ್ಚುವಂತೆ ಮಾಡಿದೆ.

ಬೀದರ್ ತಾಲ್ಲೂಕಿನ ಸಿದ್ಧಾಪುರ ಮತ್ತು ಸಾಂಗ್ವಿ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಿದೆ. ಈ ಎರಡೂ ಗ್ರಾಮಗಳಲ್ಲಿ ನೀರು ಪೂರೈಸುತ್ತಿದ್ದ ಬೋರ್‌ವೆಲ್ ಕೈಕೊಟ್ಟಿರುವುದೇ ಸಮಸ್ಯೆಗೆ ಕಾರಣವಾಗಿದೆ ಎಂದು ತಿಳಿಸುತ್ತಾರೆ ನಾಗರಿಕರು.

ಜಿಲ್ಲೆಯ ಗಡಿ ಭಾಗವು ಆಗಿರುವ ಬೀದರ್ ತಾಲ್ಲೂಕಿನ ರಸೂಲಾಬಾದ್ ಗ್ರಾಮದಲ್ಲಿಯೂ ಕಳೆದ ಒಂದೆರಡು ತಿಂಗಳಿಂದ ಪರಿಸ್ಥಿತಿ ಸುಧಾರಿಸಿಲ್ಲ. ನೀರು ಪೂರೈಕೆಗಾಗಿ ಅಳವಡಿಸಿರುವ  ಸಾರ್ವಜನಿಕ ನಳದ ಬಳಿ ಮಹಿಳೆಯರು ಕೊಡಗಳೊಂದಿಗೆ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯ.

ಸಿದ್ಧಾಪುರ ಗ್ರಾಮದಲ್ಲಿ ಬೋರ್‌ವೆಲ್ ನಿಷ್ಕ್ರೀಯಗೊಂಡು ಒಂದು ತಿಂಗಳಾಗಿದೆ. ಹೀಗಾಗಿ ಜನ ಗ್ರಾಮದ ಹೊರವಲಯದಲ್ಲಿ ಇರುವ ಬಾವಿಗಳಿಗೆ ತೆರಳಿ ನೀರು ತರಬೇಕಾಗಿದೆ. ಸುಡುವ ಬಿಸಿಲಲ್ಲಿ ಮಕ್ಕಳು ಮರಿಗಳೊಂದಿಗೆ ನೀರು ತರುವುದೇ ಕೆಲಸವಾಗಿ ಬಿಟ್ಟಿದೆ ಎಂದು ತಿಳಿಸುತ್ತಾರೆ.
 
`ಸಮಸ್ಯೆಯನ್ನು ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ  ಎಂಜಿನಿಯರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಕೂಡಲೇ ಹೊಸ ಬೋರ್‌ವೆಲ್ ಹಾಕಿಸಿ ನೀರಿನ ಸಮಸ್ಯೆ ಪರಿಹರಿಸಬೇಕು.

ಅಲ್ಲಿಯವರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು~ ಎಂದು ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ರವಿ ಸಿದ್ಧಾಪುರ ಆಗ್ರಹಿಸಿದರು.

ಬೋರ್‌ವೆಲ್ ಗ್ಯಾಪ್ ಕೊಟ್ಟಿದ್ದರಿಂದ ಸಾಂಗ್ವಿ ಗ್ರಾಮದಲ್ಲಿಯು ನೀರಿಗಾಗಿ ಹಾಹಾಕಾರ ಉಂಟಾಗಿದೆ ಎಂದು ಅವರು ತಿಳಿಸುತ್ತಾರೆ.

ಜನವಾಡ ಪಟ್ಟಣದಲ್ಲಿ ಕಳೆದ ಎರಡು ವಾರಗಳಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ. ಗ್ರಾಮದಲ್ಲಿ ಇರುವ ಆರು ಬೋರ್‌ವೆಲ್‌ಗಳ ಪೈಕಿ 2 ಗ್ಯಾಪ್ ಕೊಡುತ್ತಿವೆ. ಗ್ರಾಮದ ವಿವಿಧೆಡೆ ನಾಲ್ಕು ದಶಕಗಳಿಂದ ಹಾಕಲಾಗಿರುವ ಪೈಪ್‌ಲೈನ್ ಅಲ್ಲಲ್ಲಿ ಒಡೆದು ಹೋಗಿದ್ದರಿಂದ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ಆಪಾದಿಸುತ್ತಾರೆ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ    ಪನಸಾಲೆ.

ಗ್ರಾಮದಲ್ಲಿ ಕೂಡಲೇ ಇನ್ನೆರಡು ಬೋರ್‌ವೆಲ್ ಕೊರೆಸಬೇಕು. ಹೊಸ ಪೈಪ್‌ಲೈನ್ ಹಾಕಿಸಬೇಕು ಎಂದು  ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.