ADVERTISEMENT

ಬ್ಯಾಕ್‌ಲಾಗ್ ಹುದ್ದೆಗಳ ತ್ವರಿತ ಭರ್ತಿಗೆ ಅಗ್ರಹ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಬೀದರ್: ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು.  ಪಿಂಚಣಿ ವ್ಯವಸ್ಥೆಯನ್ನು ಖಾಸಗೀಕರಣ ಮಡುವ ಚಿಂತನೆಯನ್ನು ಕೈಬಿಡಬೇಕು ಎಂದು ನಗರದಲ್ಲಿ ನಡೆದ ಎಸ್.ಸಿ., ಎಸ್.ಟಿ. ಸರ್ಕಾರಿ ನೌಕರರ ಪ್ರಥಮ ಜಿಲ್ಲಾ ಸಮ್ಮೇಳನ ಆಗ್ರಹಪಡಿಸಿದೆ.

ಭಾನುವಾರ ನಗರದ ರಂಗಮಂದಿರದಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಪರಿಶಿಷ್ಟ ಜಾತಿ, ವರ್ಗದ ಸರ್ಕಾರಿ ನೌಕರರ ಸಮನ್ವಯ ಸಮಿತಿಯ ಮುಖಂಡರು, ಇವು ಸೇರಿದಂತೆ 10 ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು.

ಸ್ವಾತಂತ್ರ್ಯ ಬಂದು 60 ವರ್ಷ ಗತಿಸಿದರೂ ಪರಿಶಿಷ್ಟ ವರ್ಗದ ಜನರು, ನೌಕರರಿಗೆ ಇನ್ನು ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಬಂದಿಲ್ಲ. ಈ ವರ್ಗದ ನೌಕರರು, ಜನರು ಮನುಷ್ಯರೇ ಎಂದು ಮಾನಸಿಕವಾಗಿ ನೋಡುವ ಮನೋಭಾವ ಇನ್ನೂ ಮೂಡಿಲ್ಲ ಎಂದು ಮುಖಂಡರು ವಿಷಾದಿಸಿದರು.

ರಾಜ್ಯ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ವರ್ಗದ ಜನರು ಇನ್ನೂ ಸಂಕೋಲೆಯಿಂದ ಹೊರಬಂದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟಿಸಿದ ಶಾಸಕ ರಹೀಮ್ ಖಾನ್, ನೌಕರರ ಪ್ರಥಮ ಸಮ್ಮೇಳನ ನಡೆದಿರುವುದು ಸ್ವಾಗತಾರ್ಹ. ಬೇಡಿಕೆ ಈಡೇರಿಕೆಗಾಗಿ ಎಲ್ಲರೂ  ಹೋರಾಡಬೇಕಾಗಿದೆ ಎಂದರು.

ಶಾಸಕ ರಘುನಾಥರಾವ್ ಮಲ್ಕಾಪೂರೆ, ಜಿಪಂ ಉಪಾಧ್ಯಕ್ಷೆ ಸಂತೋಷಮ್ಮ, ಮುಖಂಡರಾದ  ವಿ.ಟಿ.ವೆಂಕಟೇಶಯ್ಯ, ಎಸ್.ಆರ್.ಲಿಂಗದೇವರು, ಆರ್.ಎಸ್. ದೇವಣಿಕರ್, ಆರ್.ಮೋಹನ್, ಸತ್ಯನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಮನೋಹರ್ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.