ADVERTISEMENT

ಭಾವೈಕ್ಯದ ಜಾತ್ರೆಗೆ ಕುಸ್ತಿಯ ಮೆರುಗು

ಅಷ್ಟೂರ ಗುಮ್ಮಟಗಳ ಪರಿಸರದಲ್ಲಿ ಭಕ್ತರ ಸಮಾಗಮ, ಹಿಂದೂ-–ಮುಸ್ಲಿಂ ಭಾವೈಕ್ಯ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 6:34 IST
Last Updated 15 ಮಾರ್ಚ್ 2018, 6:34 IST
ಜನವಾಡ ಸಮೀಪದ ಅಷ್ಟೂರು ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಕುಸ್ತಿ ಸ್ಪರ್ಧೆಗೆ ಶಾಸಕ ಅಶೋಕ ಖೇಣಿ ಚಾಲನೆ ನೀಡಿದರು
ಜನವಾಡ ಸಮೀಪದ ಅಷ್ಟೂರು ಗ್ರಾಮದಲ್ಲಿ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಕುಸ್ತಿ ಸ್ಪರ್ಧೆಗೆ ಶಾಸಕ ಅಶೋಕ ಖೇಣಿ ಚಾಲನೆ ನೀಡಿದರು   

ಜನವಾಡ: ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿರುವ ಸಮೀಪದ ಅಷ್ಟೂರು ಜಾತ್ರೆ ಬುಧವಾರ ಸಂಭ್ರಮ ಸಡಗರದೊಂದಿಗೆ ನಡೆಯಿತು.

ಅಹಮ್ಮದ್ ಶಾ ವಲಿ ಬಹಮನಿ ಅವರ ಜನ್ಮದಿನದ ಪ್ರಯುಕ್ತ ನಡೆದ ಜಾತ್ರೆಯು ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ವಿವಿಧ ಧರ್ಮೀಯರ ಸಮಾಗಮಕ್ಕೂ ವೇದಿಕೆ ಒದಗಿಸಿತು.
ವಿವಿಧೆಡೆಯಿಂದ ಬಂದಿದ್ದ ಭಕ್ತರು ಅಹಮ್ಮದ್ ಶಾ ವಲಿ ಬಹಮನಿ ಅವರ ಸಮಾಧಿಗೆ ಹೂವು, ಚಾದರ್ ಅರ್ಪಿಸಿದರು. ತೆಂಗಿನ ಕಾಯಿ ಒಡೆದು ಭಕ್ತಿ ಸಮರ್ಪಿಸಿದರು.

ಅಹಮ್ಮದ್ ಶಾ ವಲಿ ಬಹಮನಿ ಅವರನ್ನು ಮುಸ್ಲಿಂರು ವಲಿ ಎಂದು ಸ್ಮರಿಸಿದರೆ, ಹಿಂದೂಗಳು ಅಲ್ಲಮಪ್ರಭು ಹೆಸರಲ್ಲಿ ಪೂಜಿಸುತ್ತಾರೆ. ಜಾತ್ರೆ ಪ್ರಯುಕ್ತ ಗುಮ್ಮಟಗಳ ಪರಿಸರದಲ್ಲಿ ಜನಸಮೂಹ ಸೇರಿತ್ತು. ಜಿಲ್ಲೆ ಮಾತ್ರವಲ್ಲದೆ, ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಭಕ್ತರು ಕುಟುಂಬ ಸಮೇತ ಬಂದು ದರ್ಶನ ಪಡೆದರು.

ADVERTISEMENT

ಕಾಯಿ, ಕರ್ಪೂರ, ಬೆಂಡು, ಬತಾಸು, ಅಳ್ಳು, ಸಿಹಿ ತಿನಿಸು, ಚೂಡಾ, ಬಳೆ, ಕಿವಿಯೊಲೆ ಅಂಗಡಿಗಳು ತೆರೆದುಕೊಂಡಿದ್ದವು. ಮಹಿಳೆಯರು ಸೌಂದರ್ಯ ವರ್ಧಕ ವಸ್ತುಗಳನ್ನು ಖರೀದಿಸಿದರು. ಮಕ್ಕಳು ಬಗೆ ಬಗೆಯ ಆಟಿಕೆಗಳನ್ನು ಖರೀದಿಸಿ ಖುಷಿ ಖುಷಿಯಿಂದ ಮನೆಗಳತ್ತ ಹೆಜ್ಜೆ ಹಾಕಿದರು. ಯಂತ್ರ ಚಾಲಿತ ಜೋಕಾಲಿ, ರೈಲು ಮೊದಲಾದವು ಜಾತ್ರೆಯ ಮೆರುಗು ಹೆಚ್ಚಿಸಿದವು. ಮಕ್ಕಳು ಜತೆಗೆ ಹಿರಿಯರು ಕೂಡ ಅವುಗಳಲ್ಲಿ ಕುಳಿತು ಆನಂದ ಅನುಭವಿಸಿದರು.

ಜಿಲ್ಲೆಯಲ್ಲಿ ಕುಸ್ತಿಗೆ ಹೆಸರುವಾಸಿಯಾದ ಜಾತ್ರೆಗಳಲ್ಲಿ ಅಷ್ಟೂರು ಮುಂಚೂಣಿಯಲ್ಲಿದೆ. ಜಾತ್ರೆಯಲ್ಲಿ ಈ ವರ್ಷವೂ ಕುಸ್ತಿ ಮಹತ್ವದ ಸ್ಥಾನ ಪಡೆದುಕೊಂಡಿತು.

ಕುಸ್ತಿಗಾಗಿ ಸಿದ್ಧಪಡಿಸಿದ್ದ ಅಂಗಳದ ಬಳಿ ಬೆಳಿಗ್ಗೆಯಿಂದಲೇ ಜನ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಜನರ ನಿರೀಕ್ಷೆಯಂತೆ ವಿವಿಧೆಡೆಯಿಂದ ಬಂದಿದ್ದ ಪೈಲ್ವಾನರು ತೋಳ್ಬಲ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು.

ಪ್ರತಿ ಕುಸ್ತಿ ಪಂದ್ಯಗಳು ಕುತೂಹಲದಿಂದ ಕೂಡಿದ್ದವು. ಜಟ್ಟಿಗಳು ಪರಸ್ಪರ ಕಾದಾಟದಲ್ಲಿ ತೊಡಗಿದಾಗ ಪ್ರೇಕ್ಷಕರು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಪೈಲ್ವಾನರು ಕೂಡ ವಿವಿಧ ಪಟ್ಟುಗಳನ್ನು ಬಳಸಿ ಎದುರಾಳಿಗಳನ್ನು ಚಿತ್ ಮಾಡಿ ನೆರೆದವರಿಗೆ ಮನೋರಂಜನೆ ಒದಗಿಸಿದರು.

ಕುಸ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂಖಾನ್, ಶಾಸಕ ಅಶೋಕ ಖೇಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯಕುಮಾರ ಆನಂದೆ, ಇರ್ಷಾದ್ ಪೈಲ್ವಾನ್, ರಾಜಶೇಖರ ಪಾಟೀಲ ಅಷ್ಟೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.