ಚಿತ್ತಾಪುರ: `ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿರುವ ಭೂಮಾಪನಾ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ಮಾಡಿಕೊಡದೆ ರೈತರನ್ನು ಸತಾಯಿಸುತ್ತಿದ್ದಾರೆ~ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಲ್ಲಾ ಕೋಲಿ ಸಮಾಜ ಉಪಾಧ್ಯಕ್ಷ ಶರಣಪ್ಪ ನಾಟೀಕಾರ್ ಅವರು ಸೇಡಂ ಸಹಾಯಕ ಆಯುಕ್ತರಿಗೆ ಬುಧವಾರ ದೂರು ಸಲ್ಲಿಸಿದ್ದಾರೆ.
ತಹಸೀಲ್ದಾರ್ ಕಚೇರಿಗೆ ಬಂದಿದ್ದ ಸಹಾಯಕ ಆಯುಕ್ತರಿಗೆ ಭೇಟಿ ಮಾಡಿ ದೂರು ಸಲ್ಲಿಸಿರುವ ಅವರು, `ರೈತರು ತಮ್ಮ ಹೊಲದ ನಕಾಶೆ, ಆಕಾರ್ ಬಂದ್, ಟಿಪ್ಪಣಿ ತೆಗೆದುಕೊಳ್ಳಲು ಬಂದರೆ ಕಡತಗಳು ಸಿಗುತ್ತಿಲ್ಲ ಎಂದು 2-3 ತಿಂಗಳು ಕಾಲ ಸತಾಯಿಸಿದರೂ ಕೆಲಸ ಮಾಡಿಕೊಡುತ್ತಿಲ್ಲ~ ಎಂದು ಅವರು ಆರೋಪಿಸಿದ್ದಾರೆ.
`ಕಂಪ್ಯೂಟರ್ ಬಂದ್ ಆಗಿದೆ ಎನ್ನುವ ನೆಪ ಹೇಳುವ ಸಿಬ್ಬಂದಿಯನ್ನು ಏನಾದರೂ ಕೇಳಿದರೆ ಕೇಳಿದವರನ್ನೆ ಹೆದರಿಸುವ, ಜೊತೆಗೆ, ನಾವು ಕೆಲಸ ಮಾಡದಿದ್ದರೆ ನಮ್ಮನ್ನು ವರ್ಗಾವಣೆ ಮಾಡಿಸಿರಿ ಎಂದು ದಬಾಯಿಸುತ್ತಾರೆ~ ಎಂದು ಆಯುಕ್ತರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
`ಇಲಾಖೆಯಲ್ಲಿ ಮೇಲ್ವಿಚಾರಕರ ಹುದ್ದೆ ಖಾಲಿಯಿದೆ. ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ಭೂಮಾಪನಾ ಇಲಾಖೆಯಲ್ಲಿ ಆಗುತ್ತಿರುವ ತೊಂದರೆ ನಿವಾರಿಸಬೇಕು, ಕೆಲಸ ಮಾಡದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳದ ತಹಸೀಲ್ದಾರ್ ಮತ್ತು ಇಲಾಖೆಯ ತಪ್ಪಿತಸ್ಥ ಸಿಬ್ಬಂದಿ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು.
ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುತ್ತೇವೆ~ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಲ್ಲಾ ಕೋಲಿ ಸಮಾಜ ಉಪಾಧ್ಯಕ್ಷ ಶರಣಪ್ಪ ನಾಟೀಕಾರ್ ಅವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.