ADVERTISEMENT

ಭ್ರಷ್ಟಾಚಾರವೇ ಬಿಜೆಪಿ ಸಾಧನೆ

​ಪ್ರಜಾವಾಣಿ ವಾರ್ತೆ
Published 31 ಮೇ 2012, 5:35 IST
Last Updated 31 ಮೇ 2012, 5:35 IST

ಬೀದರ್: ಭ್ರಷ್ಟಾಚಾರ, ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ, ಆಪರೇಷನ್ ಕಮಲ ಹಾಗೂ ರೆಸಾರ್ಟ್ ಸಂಸ್ಕೃತಿ ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯಾಗಿದೆ ಎಂದು ಮಾಜಿ ಕೇಂದ್ರ ಸಚಿವರಾದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ್ ಯತ್ನಾಳ್ ಟೀಕಿಸಿದರು.

ನಾಲ್ಕು ವರ್ಷದ ಆಡಳಿತದಲ್ಲಿ ಬಿಜೆಪಿ ಶಾಸಕರು ಮಾಡಿದ್ದಷ್ಟು ಹಣ ಹಿಂದೆಂದೂ ಯಾವುದೇ ಶಾಸಕ ಮಾಡಿರಲಿಲ್ಲ. ಬಿಜೆಪಿ ಶಾಸಕರು ಓಡಾಡುವ ಕಾರುಗಳ ಬೆಲೆಯೇ ಒಂದು ಕೋಟಿ ರೂಪಾಯಿ ಆಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಆಪಾದಿಸಿದರು.

`ಬಿಜೆಪಿಯಲ್ಲಿ ಎಂದೂ ಆಗದವರು ಶಾಸಕ, ಸಚಿವರಾಗಿದ್ದಾರೆ. ಕರ್ನಾಟಕವನ್ನು ಲೂಟಿ ಮಾಡುವುದೇ ಇವರ ಉದ್ದೇಶವಾಗಿದೆ. ಹೀಗಾಗಿ ಇವರು ಸುಲಭಕ್ಕೆ ಅಧಿಕಾರಕ್ಕೆ ಬಿಟ್ಟು ಕೊಡುವರಲ್ಲ. ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದೆನಿಸುತ್ತದೆ. ಆದರೆ, ಈ ಕೆಟ್ಟ ಸರ್ಕಾರ ಎಷ್ಟು ಬೇಗ ತೊಲಗುವುದೋ ಅಷ್ಟು ಒಳ್ಳೆಯದು~ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ರಾಜ್ಯದಲ್ಲಿ ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತು ಕೇಳುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಸ ಕಚೇರಿ ಆರಂಭಿಸಿ ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ಲಿಂಗಾಯತರು ನನ್ನ ಹಿಂದೆ ಇದ್ದಾರೆ ಎಂದು ಕನಸು ಕಾಣುತ್ತಿದ್ದಾರೆ. ಅವರಲ್ಲಿ ತಾಕತ್ತಿದ್ದರೆ ಪಕ್ಷದಿಂದ ಹೊರ ಬಂದು ಶಕ್ತಿ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ಅವರ ಸುತ್ತ ವಿಷ ವರ್ತುಲ ನಿರ್ಮಾಣವಾಗಿದೆ. ಅಬಕಾರಿ ಸಚಿವ ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ ಅಂಥವರು ಅವರನ್ನು ಸುತ್ತುವರ್ದ್ದೆದಾರೆ ಎಂದರು.

ಯಡಿಯೂರಪ್ಪ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಡ್ವಾಣಿ ಮತ್ತು ಅನಂತಕುಮಾರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಕೇಂದ್ರ ವರಿಷ್ಠರು ಇವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತೀನ್ ಗಡ್ಕರಿ ಅವರಿಗೆ ಚೆಕ್ ಮೂಲಕ ಹಣ ನೀಡಿದ್ದು, ಸಿಬಿಐ ತನಿಖೆಯಲ್ಲಿ ಇದು ಬಯಲಾಗಲಿದೆ ಎಂದು ಹೇಳಿದರು.

ಬಿಜೆಪಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ನಿತೀಶಕುಮಾರ ಅವರು ಬಿಹಾರ್ ರಾಜ್ಯವನ್ನು ಸುಧಾರಿಸುತ್ತಿದ್ದಾರೆ. ಆದರೆ, ಯಡಿಯೂರಪ್ಪ ಅವರು ಕರ್ನಾಟಕವನ್ನು ಹಿಂದಿನ ಬಿಹಾರ್ ಮಾಡಿದ್ದಾರೆ ಎಂದು ದೂರಿದರು.

ಒಮ್ಮೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ ಎಂದು ಹೇಳುವ ಯಡಿಯೂರಪ್ಪ ಮತ್ತೊಮ್ಮೆ ಗೆಲ್ಲುತ್ತದೆ. ಪ್ರಚಾರಕ್ಕೆ ಹೋಗುತ್ತೇನೆ ಎನ್ನುತ್ತಾರೆ. ಅವರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ವ್ಯಂಗ್ಯವಾಡಿದರು.

ನಾನು ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಆಗುವ ಬಯಕೆ ಹೊಂದಿಲ್ಲ. ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವೆ ಶಿವಕಾಂತಾ ಚತುರೆ, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ದೇವೇಗೌಡ ತೆಲ್ಲೂರು, ಜಿಲ್ಲಾ ಅಧ್ಯಕ್ಷ ನಸೀಮುದ್ದೀನ್ ಪಟೇಲ್, ಕಾರ್ಯಾಧ್ಯಕ್ಷ ಶಾಂತಲಿಂಗ ಸಾವಳಗಿ, ಪ್ರಮುಖರಾದ ಈಶ್ವರಪ್ಪ ಚಾಕೋತೆ, ಶ್ರೀಕಾಂತ ಸ್ವಾಮಿ, ಅಶೋಕ ಕೋಡಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.