ಬೀದರ್: ವಿದ್ಯಾರ್ಥಿಗಳಲ್ಲಿ ಮತದಾನ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸುವ ಮತದಾನ ಪ್ರಾತ್ಯಕ್ಷಿಕೆ ನಗರದ ಹೊರವಲಯದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನಡೆಯಿತು.
ಜಿಲ್ಲಾಡಳಿತ ಆಯೋಜಿಸಿದ್ದ ಮತದಾನ ಪ್ರತ್ಯಕ್ಷಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳೇ ಮತಗಟ್ಟೆ ಅಧಿಕಾರಿ, ಸಹಾಯಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಪ್ರಾತ್ಯಕ್ಷಿಕೆಯಲ್ಲಿ ವಿದ್ಯಾರ್ಥಿಗಳು ಅಣಕು ಮತ ಚಲಾಯಿಸುವ ಮೂಲಕ ಮತದಾನದ ಕ್ರಮ ಅರಿತುಕೊಂಡರು.
ಯುವ ಮತದಾರರಾದ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಫೇಸ್‌ಬುಕ್ ಮೂಲಕ ವಿಮರ್ಶೆ ಮಾಡುವ ಬದಲು ಪ್ರಜಾಪ್ರಭುತ್ವದ ಪ್ರಮುಖ ಭಾಗವಾದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸೌಕರ್ಯಗಳನ್ನು ಒದಗಿಸಿಕೊಡುವ ಉತ್ತಮ ಸರ್ಕಾರ ರಚನೆಗೆ ಸಹಕರಿಸಬೇಕು ಎಂದು ಕೇಂದ್ರ ಜಾಗೃತ ವೀಕ್ಷಕರಾದ ರಾಜೀವ್ ಜೈನ್ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಯುವ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಅದು ಮತದಾರರ ಕರ್ತವ್ಯ ಆಗಿದೆ ಎಂದು ಜಿಲ್ಲಾ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ತಿಳಿಸಿದರು.
ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲ್‌ಕುಮಾರ್ ಘೋಷ್, ಸಹಾಯಕ ಆಯುಕ್ತೆ ಆರತಿ ಆನಂದ ಉಪಸ್ಥಿತರಿದ್ದರು.
ಚುನಾವಣೆ ವೆಚ್ಚ ವೀಕ್ಷಕರಾಗಿ ರಮೇಶ್: ಲೋಕಸಭಾ ಕ್ಷೇತ್ರದ ಚುನಾವಣೆ ವೆಚ್ಚದ ವೀಕ್ಷಕ ರಮೇಶ್ ರಾಮ ಅವರು ಜಿಲ್ಲೆಗೆ ಬಂದಿದ್ದು, ಅವರ ಮೊಬೈಲ್ ಸಂಖ್ಯೆ 9481157882ಗೆ ಸಂರ್ಪಕಿಸಬಹುದು.
ಮತದಾನ ಜಾಗೃತಿ ವೀಕ್ಷಕ ರಾಜೀವ್ ಕೆ. ಜೈನ್ ಅವರ ಮೊಬೈಲ್ ಸಂಖ್ಯೆ 9481149210ಗೆ ಸಂಪರ್ಕಿಸಬಹುದು.
‘ಅಭ್ಯರ್ಥಿಗಳ ಖರ್ಚು ವೆಚ್ಚ ಪ್ರತಿದಿನ ವರದಿ ಸಲ್ಲಿಸಿ’: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾವಹಿಸಿ, ಪ್ರತಿದಿನ ವರದಿ ಸಲ್ಲಿಸಬೇಕು ಎಂದು ಚುನಾವಣೆ ವೆಚ್ಚದ ವೀಕ್ಷಕ ರಮೇಶ್ ರಾಮ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಚುನಾವಣೆ ಖರ್ಚು ವೆಚ್ಚದ ಮೇಲೆ ನಿಗಾವಹಿಸುವ ಅಧಿಕಾರಿ, ಜಿಲ್ಲಾ ನೋಡಲ್ ಅಧಿಕಾರಿ ಹಾಗೂ ಸಂಚಾರಿ ಜಾಗೃತದಳದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೇಂದ್ರ ಚುನಾವಣಾ ಆಯೋಗದ ನಿಯಮದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಹಾಗೂ ಕಾನೂನಿನ ಪ್ರಕಾರ ಎಷ್ಟು ಖರ್ಚು ಮಾಡಬೇಕು ಎಂಬುದರ ಬಗ್ಗೆ ಪ್ರತಿದಿನ ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ವರದಿ ನೀಡಬೇಕು ಹಾಗೂ ಯಾವುದೇ ಅಭ್ಯರ್ಥಿ ಜನರಿಗೆ ಆಸೆ ಆಮಿಷಗಳನ್ನು ತೋರಿಸಿ, ಒತ್ತಡ ಹಾಕಿದರೆ ಆ ಬಗ್ಗೆ ಕೂಡಲೇ ವರದಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಭಾಲ್ಕಿ ವರದಿ: ಮತದಾನವೆಂಬುದು ನಮಗೆ ಸಂವಿಧಾನ ನೀಡಿರುವ ಅತ್ಯಂತ ಪವಿತ್ರವಾದ ಹಕ್ಕು ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬ ಅರ್ಹ ನಾಗರಿಕನು ತಪ್ಪದೇ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕನ್ನು ಬಳಸಿಕೊಳ್ಳಬೇಕು. ನಿರ್ಭಯವಾಗಿ ಮತದಾನ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಹೇಳಿದರು.
ಪುರಸಭೆಯಿಂದ ಭಾಲ್ಕಿಯ ವಿವಿಧ ಬಡಾವಣೆಗಳಲ್ಲಿ ಗುರುವಾರ ನಡೆದ ಮತದಾನದ ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡಿದರು.
ಚುನಾವಣಾ ನೀತಿ ಸಂಹಿತೆಯನ್ನು ಗೌರವಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಾಗರಿಕರು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕು. ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣಾ ಪ್ರಕ್ರೀಯೆ ನಡೆಯಲು ಪೊಲೀಸರಿಗೆ ಮತ್ತು ಸ್ಥಳೀಯ ಅಡಳಿತಕ್ಕೆ ಸಹಕರಿಸಬೇಕು ಎಂದರು.
ಸಿಬ್ಬಂದಿ ರಮೇಶ ಕರಕಾಳೆ, ಸ್ವಾಮಿದಾಸ, ದಿನೇಶ ಪತಂಗೆ, ಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.