ADVERTISEMENT

ಮಧುರ ಕಂಠದ ಗಾಯಕಿ ಈಶ್ವರಿ

ಗಾಯಕಿಯ ಕಂಠಸಿರಿಗೆ ಮನಸೋತ ಸಂಗೀತಾಸಕ್ತರು

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 12:27 IST
Last Updated 17 ಜೂನ್ 2018, 12:27 IST
ಭಾಲ್ಕಿಯಲ್ಲಿ ನಡೆದ ವಚನ ಜಾತ್ರೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಗಾಯಕಿ ಈಶ್ವರಿ ಐನೋಳಿ (ಸಂಗ್ರಹ ಚಿತ್ರ)
ಭಾಲ್ಕಿಯಲ್ಲಿ ನಡೆದ ವಚನ ಜಾತ್ರೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಗಾಯಕಿ ಈಶ್ವರಿ ಐನೋಳಿ (ಸಂಗ್ರಹ ಚಿತ್ರ)   

ಭಾಲ್ಕಿ: ಯುವ ಗಾಯಕಿ ಈಶ್ವರಿ ಐನೋಳಿ ಅವರು ತಮ್ಮ ಮಧುರ ಕಂಠದಿಂದ ಸಂಗೀತ ಪ್ರಿಯರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಐನೋಳಿ ಗ್ರಾಮದ ಈಶ್ವರಿ ಅವರು ಇಲ್ಲಿನ ಅಲ್ಲಮಪ್ರಭು ಬಿ.ಇಡಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಹಿಂದೂಸ್ತಾನಿ, ಕರ್ನಾಟಕ ಶಾಸ್ತ್ರೀಯ, ಪಾಪ್‌, ಲಘು ಸಂಗೀತ, ಭಕ್ತಿ ಗೀತೆ, ಚಿತ್ರಗೀತೆ, ಜಾನಪದ ಗೀತೆ, ಕವ್ವಾಲಿ, ವಚನ ಸಂಗೀತ, ಶಿಶು ಗೀತೆಗಳನ್ನು ತಮ್ಮ ಮಧುರ ಕಂಠದಲ್ಲಿ ಹಾಡಿ ಮೋಡಿ ಮಾಡುತ್ತಾರೆ.

ADVERTISEMENT

‘ನನಗೆ ಚಿಕ್ಕಂದಿನಿಂದ ಗಾಯನದಲ್ಲಿ ಹೆಚ್ಚು ಆಸಕ್ತಿ ಇತ್ತು. ಹೀಗಾಗಿ ಓದಿಗಿಂತ ಹೆಚ್ಚು ಸಮಯ ಸಂಗೀತ ಕೇಳುವುದು, ಹಾಡುವಿಕೆಯಲ್ಲಿ ಕಳೆಯುತ್ತಿದ್ದೆ. ನನ್ನ ಕಲೆಯನ್ನು ಗುರುತಿಸಿದ್ದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹಿರೇಮಠದಲ್ಲಿ ಆಶ್ರಯ ನೀಡಿ ಸಂಗೀತ ಕಲಿಕೆಗೆ ಮತ್ತು ಶಿಕ್ಷಣ ಪಡೆಯಲಿಕ್ಕೆ ಅವಕಾಶ ನೀಡಿದರು. ಹಿಂದೂಸ್ತಾನಿ ಸಂಗೀತವನ್ನು ಶೇಖ್‌ ಹನ್ನುಮಿಯ್ಯಾ ಅವರಲ್ಲಿ ಅಭ್ಯಾಸ ಮಾಡಿದ್ದು, ವಿದ್ವತ್‌ ಪೂರ್ವದವರೆಗೆ ಕಲಿತಿದ್ದೇನೆ’ ಎನ್ನುತ್ತಾರೆ ಐನೋಳಿ ಅವರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧೆಡೆ ಹಮ್ಮಿಕೊಂಡಿದ್ದ ಸಂಗೀತ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮ, ಬಸವಕಲ್ಯಾಣದ ಬಸವ ಉತ್ಸವ, ಬೀದರ್‌ ಉತ್ಸವ, ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ, ವಚನ ಜಾತ್ರೆ, ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ, ಹಾರಕೂಡದ ಚನ್ನಬಸವ ಶಿವಯೋಗಿಗಳ ಜಾತ್ರಾ ಮಹೋತ್ಸವ ಮತ್ತು ಆಕಾಶವಾಣಿಯಲ್ಲೂ ಈಶ್ವರಿ ಅವರು ಕಾರ್ಯಕ್ರಮ ನೀಡಿದ್ದಾರೆ.

ಈಶ್ವರಿ ಅವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ–ಸಂಸ್ಥೆಗಳು ಭಾಲ್ಕಿ, ಔರಾದ್‌, ಬಸವಕಲ್ಯಾಣ, ಮನ್ನಾಎಖೇಳ್ಳಿ, ಬೀದರ್‌, ಖಟಕ ಚಿಂಚೋಳಿ, ಬಗದಲ್‌ ಸೇರಿ ಇತರೆಡೆ ಅವರನ್ನು ಆಹ್ವಾನಿಸಿ ಸಂಗೀತ ಕಾರ್ಯಕ್ರಮ ಆಯೋಜಿಸಿವೆ. ಬಸವಕಲ್ಯಾಣದ ಬಸವ ಉತ್ಸವ, ಬೀದರ್‌ ಉತ್ಸವ ಕಾರ್ಯಕ್ರಮಗಳಲ್ಲೂ ಗಾಯನ ಮಾಡಿ, ಸಭಿಕರ ಚಪ್ಪಾಳೆ ಗಿಟ್ಟಿಸಿದ್ದಾರೆ.

ಇವರ ಕಲೆಯನ್ನು ಗುರುತಿಸಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳು ಗೌರವಿಸಿವೆ.

ಸಂಗೀತ ನೊಂದ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಬದುಕಿನಲ್ಲಿ ಹತಾಶರಾದವರಿಗೆ ಉತ್ಸಾಹದ ಚಿಲುಮೆಯಾಗಿ ಕೆಲಸ ಮಾಡುತ್ತದೆ
- ಈಶ್ವರಿ ಐನೋಳಿ, ಗಾಯಕಿ

ಬಸವರಾಜ್‌ ಎಸ್‌.ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.