ADVERTISEMENT

ಮರಳು ಸಾಗಾಟಕ್ಕೆ ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 8:25 IST
Last Updated 23 ಏಪ್ರಿಲ್ 2012, 8:25 IST

ಔರಾದ್: ಮಾಂಜ್ರಾ ನದಿಯಿಂದ ವಿವಿಧೆಡೆ ಅಕ್ರಮವಾಗಿ ಮರಳು ಸಾಗಾಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಮಂತ ಬಿರಾದಾರ, ಕಾರ್ಯದರ್ಶಿ ಪ್ರಕಾಶ ಬಾವುಗೆ ಈಚೆಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಸಂಬಂಧ ಲಿಖಿತ ದೂರು ಸಲ್ಲಿಸಿದ್ದಾರೆ.

ಸದ್ಯ ಬೇಸಿಗೆ ಇರುವುದರಿಂದ ನದಿಯಲ್ಲಿ ನೀರು ಖಾಲಿಯಾಗಿದೆ. ಕೆಲವರು ಇದರ ಉಪಯೋಗ ಪಡೆದು ನದಿಯಲ್ಲಿನ ಮರಳು ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದಾರೆ. ನಿತ್ಯ ನೂರಾರು ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ರಾಜಾರೋಷವಾಗಿ ಮರಳು ಸಾಗಾಟ ಮಾಡಲಾಗುತ್ತಿದೆ.
 
ಈ ವಿಷಯ ಸಂಬಂಧಿತರಿಗೆ ಗೊತ್ತಿದ್ದರೂ ಸುಮ್ಮನೆ ಕುಳಿತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮರಳು ಸಾಗಾಟದಿಂದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕುಸಿದು ಬಾವಿ, ಬೋರ್‌ವೆಲ್ ಬತ್ತಿಹೋಗುತ್ತಿವೆ. ಇದರಿಂದಾಗಿ ಮೊದಲೇ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ. ಜತೆಗೆ ನದಿ ಪಾತ್ರದ ಹೊಲಗಳಿಗೂ ತೊಂದರೆಯಾಗಲಿದೆ.

ಪರಿಸರಕ್ಕೂ ಧಕ್ಕೆಯಾಗಲಿದ್ದು, ಮಾಂಜ್ರಾ ನದಿಯಲ್ಲಿನ ಮರಳು ಸಾಗಾಣಿಕೆಗೆ ಶಾಶ್ವತ ತಡೆ ನೀಡುವಂತೆ ರೈತ ಸಂಘ ಆಗ್ರಹಿಸಿದೆ.

ಪಂಪ್‌ಸೆಟ್ ಮಾಹಿತಿ: 11 ವರ್ಷಗಳಿಂದ ಜಿಲ್ಲೆಯಲ್ಲಿ ಎಷ್ಟು ಅಕ್ರಮ ಪಂಪ್‌ಸೆಟ್ ಸಕ್ರಮಗೊಳಿಸಲಾಗಿದೆ ಎಂಬುದಕ್ಕೆ ಸಮಗ್ರ ಮಾಹಿತಿ ನೀಡುವಂತೆ ರೈತ ಸಂಘ ಜೆಸ್ಕಾಂಗೆ ಮನವಿ ಮಾಡಿದೆ. ಸಂಘದ ಪ್ರಮುಖರು ಈಚೆಗೆ ಜೆಸ್ಕಾಂ ಸೂಪರಿಂಟೆಂಡೆಂಟ್ ಎಂಜಿನಿಯರ್‌ಗೆ ಲಿಖಿತ ಮನವಿ ಬರೆದು ಮಾಹಿತಿ ಕೇಳಿದ್ದಾರೆ.

ಪಂಪ್‌ಸೆಟ್ ಸಕ್ರಮ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ರೈತರಿಂದ ಹಣ ವಸೂಲಿ ಮಾಡಲಾಗಿದೆ. ಹಣ ತುಂಬಿದ ಅನೇಕ ರೈತರಿಗೆ ಕಂಬ, ತಂತಿ, ಇತರೆ ವಿದ್ಯುತ್ ಸಲಕರಣೆಗಳು ಒದಗಿಸಲಾಗಿಲ್ಲ. ಇದರಿಂದ ರೈತರು ನಿತ್ಯ ಕಚೇರಿಗೆ ಅಲೆಯಬೇಕಾಗಿದೆ ಎಂದು ದೂರಿದ್ದಾರೆ. ಈ ಬಗ್ಗೆ 15 ದಿನಗಳಲ್ಲಿ ಸಮಗ್ರ ಮಾಹಿತಿ ನೀಡದಿದ್ದಲ್ಲಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘ ಎಚ್ಚರಿಸಿದೆ.

ಸಂಘದ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ, ರಾಜ್ಯ  ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ತಾಲ್ಲೂಕು ಅಧ್ಯಕ್ಷ ಸಿದ್ರಾಮಪ್ಪ ಅಣದೂರೆ, ಶ್ರೀಮಂತ ಬಿರಾದಾರ, ಸಿದ್ದಪ್ಪ, ಚಂದ್ರಶೇಖರ ಜಮಖಂಡಿ, ಸತೀಶ ನನ್ನೂರೆ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.