ADVERTISEMENT

ಮಳೆ, ವಾಹನ ಒತ್ತಡ: ರಸ್ತೆ ಗುಂಡಿಮಯ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 7:10 IST
Last Updated 22 ಜುಲೈ 2013, 7:10 IST
ಬೀದರ್‌ನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ವಾಹನಗಳ ಸಂಚಾರದ ಒತ್ತಡ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ಗುಂಡಿ ನಿರ್ಮಾಣ ಆಗಿರುವುದು
ಬೀದರ್‌ನಲ್ಲಿ ಸುರಿದ ಧಾರಾಕಾರ ಮಳೆ ಮತ್ತು ವಾಹನಗಳ ಸಂಚಾರದ ಒತ್ತಡ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ಗುಂಡಿ ನಿರ್ಮಾಣ ಆಗಿರುವುದು   

ಬೀದರ್: ಸತತ ನಾಲ್ಕು-ಐದು ದಿನ ಬಿದ್ದ ಮಳೆ ಜನ ಜೀವನವನ್ನು ಹೈರಾಣಾಗಿಸಿದೆ. ಮೋಡಗಳು ಚದುರಿ ಮಳೆ ಸ್ವಲ್ಪಮಟ್ಟಿಗೆ ಬಿಡುವು ನೀಡುವ ಮೂಲಕ ನಾಗರಿಕರಲ್ಲಿ ನಿರಾಳ ಭಾವನೆ ಮೂಡಿದರೂ ಇನ್ನೊಂದೆಡೆ ಮಳೆಯ ಪರಿಣಾಮ ಜನರನ್ನು ಬಾಧಿಸಲಿದೆ.

ಅದು ನಗರದ ಅವ್ಯವಸ್ಥೆ. ನಿರಂತರ ಮಳೆ, ಗುಣಮಟ್ಟವಲ್ಲದ ಕಾಮಗಾರಿಯಿಂದಾಗಿ ನಗರದ ರಸ್ತೆಗಳಲ್ಲಿ ಗುಂಡಿಗಳು ಮೂಡಿವೆ. ಈ ಮೊದಲು ಸಣ್ಣ ಪ್ರಮಾಣದಲ್ಲಿ ಇದ್ದ ಗುಂಡಿಗಳು, ಮಳೆ ಮತ್ತು ವಾಹನಗಳ ಸಂಚಾರದ ಒತ್ತಡ ಪರಿಣಾಮ ವಿಸ್ತಾರವಾಗಿವೆ. ಪರಿಣಾಮ, ಈ ರಸ್ತೆಗಳು ಬರುವ ದಿನಗಳಲ್ಲಿ ಇನ್ನಷ್ಟು ಅವ್ಯವಸ್ಥಿತವಾಗುವ ಪರಿಸ್ಥಿತಿಯಲ್ಲಿದೆ.

ನಗರದ ಮುಖ್ಯ ಸಂಪರ್ಕ ರಸ್ತೆಯಾಗಿರುವ ಉದಗೀರ್ ರಸ್ತೆ, ರೋಟರಿ ವೃತ್ತದ ಬಳಿಯ ಬ್ಯಾಕ್ವರ್ಡ್ ಹಾಸ್ಟೆಲ್ ಸಮೀಪ, ಗುಂಪಾ ರಸ್ತೆ, ಅಂಬೇಡ್ಕರ ವೃತ್ತ, ಜನವಾಡಾ ರಸ್ತೆ ಹೀಗೆ ಎಲ್ಲ ರಸ್ತೆಗಳಲ್ಲಿ ಕಂಡುಬರುವ ಸಾಮಾನ್ಯ ಚಿತ್ರಣ.

ಸತತ ನಾಲ್ಕೈದು ದಿನಗಳ ಮಳೆಯಿಂದಾಗಿ, ಈ ಹಿಂದೆಯೇ ಒಳ ಚರಂಡಿ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿ ಸಲುವಾಗಿ ಅಗೆಯಲಾಗಿದ್ದ ರಸ್ತೆಗಳ ಕಾಮಗಾರಿ ಕೂಡಾ ವಿಳಂಬವಾಗಿರುವ ಕಾರಣ ವಾಹನಗಳ ಸಂಚಾರ ವ್ಯವಸ್ಥೆ ಇನ್ನಷ್ಟು ಹದಗೆಟ್ಟಿದೆ.

ಈ ಎಲ್ಲ ರಸ್ತೆಗಳು ಕೇವಲ ಮೂರು ವರ್ಷಗಳ ವಿಸ್ತರಣೆ ಪ್ರಕ್ರಿಯೆ ನಡೆದಾಗನಿರ್ಮಾಣವಾದ ರಸ್ತೆಗಳು. ಅಲ್ಪಾವಧಿಯಲ್ಲೇ ಈ ಸ್ಥಿತಿಗೆ ಬಂದಿವೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಗಾರ್ ಅವರು ಟೀಕಿಸುತ್ತಾರೆ.

ಈ ಗುಂಡಿಗಳನ್ನು ಈಗಲೇ ಸರಿಪಡಿಸಲು ಒತ್ತು ನೀಡದಿದ್ದರೆ ವಾಹನಗಳು ದುಃಸ್ಥಿತಿಗೆ ಬರುತ್ತವೆ. 
ಈ ಬಗೆಗೆ ಈಗಾಗಲೇ ಜಿಲ್ಲಾಧಿಕಾರಿಗಳು, ನಗರಸಭೆ ಆಯುಕ್ತರ ಗಮನಕ್ಕೂ ತರಲಾಗಿದೆ. ಆದಷ್ಟು ಶೀಘ್ರ ತಾತ್ಕಾಲಿಕ ದುರಸ್ತಿಯನ್ನಾದರೂ ಮಾಡಬೇಕು
ಎಂಬುದು ನಮ್ಮ ಆಗ್ರಹ.

ಇಂಥ ಸಮಸ್ಯೆಗಳು ಪ್ರತಿಭಟನೆ ಮಾಡದೇ ಬಗೆಹರಿಯುವುದು ಸಾಧ್ಯವಿಲ್ಲ. ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕು. ಆದರೆ, ಅವರು ಗಮನಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ, ವ್ಯಾಪಾರಿ ಸಮುದಾಯದ ಪರವಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ವಾರದಲ್ಲಿ  ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿಭಟನೆಯ ಸಾಧ್ಯತೆಗಳ ಬಗೆಗೂ ಚಿಂತನೆ ನಡೆಸಲಾಗುವುದು ಎಂದು ಪ್ರತಿಕ್ರಿಯಿಸಿದರು. ನಗರಸಭೆ ಆಯುಕ್ತ ರಾಮದಾಸ್ ಈ ಕುರಿತ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.