ADVERTISEMENT

ಮಸ್ಕಲ್ ತಾಂಡಾದಲ್ಲಿ ನೀರಿನ ಸಮಸ್ಯೆ ಉಲ್ಬಣ

ಗುಳೆ ಹೋಗುವ ಸಿದ್ಧತೆಯಲ್ಲಿ ಜನ–ಜಾನುವಾರುಗಳು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 6:23 IST
Last Updated 10 ಏಪ್ರಿಲ್ 2018, 6:23 IST
ಔರಾದ್ ತಾಲ್ಲೂಕಿನ ಸಂತಪುರ ಬಳಿಯ ಮಸ್ಕಲ್ ತಾಂಡಾ ನಿವಾಸಿಗಳು ನೀರಿಗೆ ನಿಂತಿರುವುದು
ಔರಾದ್ ತಾಲ್ಲೂಕಿನ ಸಂತಪುರ ಬಳಿಯ ಮಸ್ಕಲ್ ತಾಂಡಾ ನಿವಾಸಿಗಳು ನೀರಿಗೆ ನಿಂತಿರುವುದು   

ಔರಾದ್: ತಾಲ್ಲೂಕಿನ ಸಂತಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಸ್ಕಲ್ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. 100 ಮನೆಗಳಿರುವ ಈ ತಾಂಡಾದಲ್ಲಿ 1 ಸಾವಿರ ಜನಸಂಖ್ಯೆ ಇದೆ. ಜಾನುವಾರು ಸಾಕಾಣಿಕೆ ಮತ್ತು ಕೂಲಿ ಇವರ ಕಾಯಕ.ಆದರೆ, ಬೇಸಿಗೆ ಮುನ್ನವೇ ಈ ತಾಂಡಾಕ್ಕೆ ನೀರಿನ ಕೊರತೆ ಉಂಟಾಗಿದೆ. ‘ಜನವರಿ ತಿಂಗಳಿನಿಂದ ನೀರಿನ ಸಮಸ್ಯೆ ಇದ್ದು.  ಕೊಳವೆ ಬಾವಿ ಬತ್ತಿ ಹೋಗಿದೆ. 2–3 ಕಿ.ಮೀ. ದೂರದಿಂದ ಕುಡಿಯಲು ನೀರು ತರಬೇಕಾಗಿದೆ. ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ’ ಎನ್ನುತ್ತಾರೆ ತಾಂಡಾದ ನಿವಾಸಿ.

‘ನಾವು ಉಪ ಜೀವನ ಮಾಡುತ್ತಿರುವುದೇ ಜಾನುವಾರುಗಳ ಮೇಲೆ. ಇನ್ನು ಅವುಗಳಿಗೆ ನೀರು ಸಿಗದೆ ಇದ್ದರೆ ನಾವು ಬದುಕುವುದು ಕಷ್ಟ. ಹೀಗಾಗಿ ಮಳೆಗಾಲ ಬರುವವರೆಗೆ ನೀರು ಇರುವ ಕಡೆ ಜಾನುವಾರು ಜತೆ ಗುಳೆ ಹೋಗುವ ಚಿಂತನೆಯಲ್ಲಿ ಇದ್ದವೇ’ ಎನ್ನುತ್ತಾರೆ ತಾಂಡಾ ಮಹಿಳೆಯೊಬ್ಬರು.

ಚಟ್ನಾಳ ತಾಂಡಾದಲ್ಲಿ ಸಹ ಕುಡಿಯುವ ನೀರಿಗಾಗಿ ಪರದಾಡಬೇಕಿದೆ. ಒಂದು ನೀರಿನ ಟ್ಯಾಂಕ್ ಇದ್ದು, ಅದರಿಂದ ನೀರು ಸಂಗ್ರಹಿಸಲು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಿದೆ ಎಂದು ಚಟ್ನಾಳ ತಾಂಡಾ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈಚೆಗೆ ಸಂತಪುರ ಗ್ರಾಮ ಪಂಚಾಯಿತಿಗೆ ಮುಕ್ತಿಗೆ ಹಾಕಿ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.

ADVERTISEMENT

ಈ ಎರಡು ತಾಂಡಾ ಸುತ್ತಲೂ ನೀರಿನ ಮೂಲ ಇಲ್ಲ. ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಟ್ಯಾಂಕರ್ ವ್ಯವಸ್ಥೆ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ತಿಳಿಸಿದ್ದಾರೆ.

‘ಸಂತಪುರ, ಮಸ್ಕಲ್ ತಾಂಡಾ, ಚಟ್ನಾಳ ತಾಂಡಾ, ಚೊನ್ನೆಕೇರಿ, ನಂದ್ಯಾಳ, ಎಕಲಾರ ತಾಂಡಾ, ಕಿರುಗುಣವಾಡಿ ಸೇರಿದಂತೆ 20 ಊರುಗಳಲ್ಲಿ ನೀರಿನ ಕೊರತೆ ಇದೆ. ಕೆಲ ಕಡೆ ಹೊಸದಾಗಿ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ. ಹೀಗಾಗಿ ಅಂತಹ ಕಡೆ ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆದಿದೆ. ಸಮಸ್ಯೆ ಪರಿಹಾರ ಮತ್ತು ಅಗತ್ಯ ಅನುದಾನ ಬಿಡುಗಡೆಗಾಗಿ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ ತಿಳಿಸಿದ್ದಾರೆ.

**

ಸಂತಪುರ, ಚಿಂತಾಕಿ, ದಾಬಕಾ ಹೋಬಳಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲಾಗುವುದು – ಜಗನ್ನಾಥ ಮೂರ್ತಿ,ಇಒ ಔರಾದ್’

**

ಮನ್ಮಥಪ್ಪಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.