ADVERTISEMENT

ಮಹಿಳೆ ಸಾವು, 16 ಜನ ಅಸ್ವಸ್ಥ

ವಾಂತಿ ಭೇದಿ: ಬಗದಲ್‌ ಗ್ರಾಮಕ್ಕೆ ಸಿ.ಇ.ಒ. ಭೇಟಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 6:23 IST
Last Updated 23 ಸೆಪ್ಟೆಂಬರ್ 2013, 6:23 IST

ಜನವಾಡ: ವಾಂತಿ ಭೇದಿಯಿಂದಾಗಿ ಬೀದರ್‌ ತಾಲ್ಲೂಕಿನ ಬಗದಲ್‌ ಗ್ರಾಮದಲ್ಲಿ ಭಾನುವಾರ ಓರ್ವ ಮಹಿಳೆ ಮೃತಪಟ್ಟಿದ್ದು, 16 ಜನ ಅಸ್ವಸ್ಥರಾಗಿದ್ದಾರೆ.

ಮಹಾದೇವಿ ನೀಲಕಂಠ (35) ಮೃತ ಮಹಿಳೆಯಾಗಿದ್ದಾರೆ. ಅಸ್ವಸ್ಥರಾದವರ ಪೈಕಿ ಐವರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರನ್ನು ಮನ್ನಾಎಖ್ಖೆಳ್ಳಿ ಹಾಗೂ ಏಳು ಜನರನ್ನು ಬೀದರ್ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ದಾಖಲಾದವರಲ್ಲಿ ಗ್ರಾಮದ ಶೇಖರ್‌, ಮಹೇಶ್‌, ವೆಂಕಟೇಶ್‌,  ಪುಟ್ಟಮ್ಮ, ನಾಗೇಶ, ಉಮಾದೇವಿ, ಸುಧಾರಾಣಿ, ಸುನೀತಾ, ಶಿವರಾಜ, ತಸ್ಲಿಮ್‌, ಮಲ್ಲಪ್ಪ ಹಾಗೂ ಇತರರು ಸೇರಿದ್ದಾರೆ.

ಗ್ರಾಮದಲ್ಲಿ ಗುರುವಾರದಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ. ಈವರೆಗೆ ಒಬ್ಬರು ಸಾವನ್ನಪ್ಪ್ಪಿದ್ದು, ಒಟ್ಟು 23 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗ್ರಾಮದ ಹೊರವಲಯದ ಹಳ್ಳದಲ್ಲಿ ಎರಡು ತೆರೆದ ಬಾವಿಗಳಿದ್ದು, ಅವುಗಳ ಮೂಲಕವೇ  ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ತೆರೆದ ಬಾವಿಗಳಲ್ಲಿ ಮಳೆ ನೀರು ಮತ್ತು ಕಲ್ಮಷ ನೀರು ಸೇರಿರುವುದೇ ಘಟನೆಗೆ ಕಾರಣವಾಗಿದೆ ಎಂದು ಬೀದರ್‌ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಗವಾನ್‌ ಬಿ. ತಿಳಿಸಿದ್ದಾರೆ.

ಈಗಾಗಲೇ ಕುಡಿಯುವ ನೀರು ಪರೀಕ್ಷೆ ನಡೆಸಲಾಗಿದೆ. ಕಾಯಿಸಿ ಆರಿಸಿದ ನೀರನ್ನೇ ಬಳಸುವಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ.

ಒಆರ್‌ಎಸ್‌ ಪಾಕೇಟ್‌ ಹಾಗೂ ಗುಳಿಗೆಗಳನ್ನು ಮನೆ ಮನೆಗೆ ತಲುಪಿಸಲಾಗಿದೆ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಎಲ್ಲೆಡೆ ಬ್ಲೀಚಿಂಗ್‌ ಪೌಡರ್‌ ಸಿಂಪಡಿಸಲಾಗಿದೆ.

ಆರೋಗ್ಯ ಇಲಾಖೆಯಿಂದ ಫಿನಾಯಿಲ್‌ ಸಿಂಪಡಿಸಲಾಗಿದೆ. ನೀರಿನ ಮೂಲಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಸದ್ಯ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಬ್ಬರು ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಮೂರು ಜನ ಸಿಬ್ಬಂದಿ ಇದ್ದಾರೆ. ಪರಿಸ್ಥಿತಿಯ ಮೇಲೆ ಸಂಪೂರ್ಣ ನಿಗಾ ಇರಿಸಲಾಗಿದೆ.

ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ತಾತ್ಕಾಲಿಕ ಅಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಜ್ವಲಕುಮಾರ್‌ ಘೋಷ್‌ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಸ್ಥಿತಿ ಮೇಲೆ ತೀವ್ರ ನಿಗಾ ಇರಿಸಲು ಆದೇಶಿಸಿದರು. ಗ್ರಾಮಕ್ಕೆ ಟ್ಯಾಂಕರ್ ಮೂಲ ನೀರು ಪೂರೈಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮದನಾ ವೈಜಿನಾಥ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಅನಿಲಕುಮಾರ್‌ ಚಿಂತಾಮಣಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಫುಲೇಕರ್‌ ಮತ್ತಿತರರು ಭೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.