ADVERTISEMENT

ಮಾಣಿಕನಗರ: ಭಕ್ತಿಭಾವದ ಯೋಗದಂಡ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:54 IST
Last Updated 12 ಡಿಸೆಂಬರ್ 2013, 6:54 IST

ಹುಮನಾಬಾದ್‌: ಸಮೀಪದ ಇತಿಹಾಸ ಪ್ರಸಿದ್ಧ ಮಾಣಿಕನಗರದ ಮಾಣಿಕಪ್ರಭು ಜಾತ್ರೆ ಅಂಗವಾಗಿ ಪ್ರತಿ ವರ್ಷ ಜಾತ್ರೆಗೂ ಎರಡು ದಿನ ಮುನ್ನ ನಡೆಯುವ ತೀರ್ಥಸ್ನಾನ ಹಾಗೂ ಯೋಗದಂಡ ಪೂಜೆ ಬುಧವಾರ ಅಪಾರ ಭಕ್ತ ಸಮುದಾಯ ಮಧ್ಯೆ  ನೆರವೇರಿತು.

ಮಾಣಿಕಪ್ರಭು ದೇವಸ್ಥಾನ ಗರ್ಭಗುಡಿಯಲ್ಲಿ ಪೀಠಾಧಿಪತಿ ಜ್ಞಾನರಾಜ ಪ್ರಭುಗಳ ಸಮ್ಮುಖದಲ್ಲಿ ದೇವಸ್ಥಾನ ಶುದ್ಧೀಕರಣ ನಡೆಯಿತು. ಜಲಾವೃತ­ಗೊಂಡ ಪ್ರಭು ಮಹಾರಾಜರ ಸಮಾಧಿ ಎದುರಿನಲ್ಲಿನ ನೀರಿನಲ್ಲಿ ಜ್ಞಾನರಾಜ ಪ್ರಭುಗಳು ಪರಂಪರೆಯಂತೆ ದೀರ್ಘದಂಡ ಪ್ರಣಾಮ ಸಲ್ಲಿಸಿದರು. ನಂತರ ಸಿಂಪಡಿಸಲಾದ ನೀರಲ್ಲೇ ಅಪಾರ ಸಂಖ್ಯೆಯ ಭಕ್ತರು ತೀರ್ಥಸ್ನಾನ ಮಾಡಿ ಪುನೀತರಾದರು.

ಪ್ರಭು ಮಹಾರಾಜರು ಬಳಸುತ್ತಿದ್ದ ವಿಶೇಷ ಯೋಗಶಕ್ತಿ ಹೊಂದಿರುವ 500ಕ್ಕೂ ದಂಡಗಳಿಗೆ ನೆರೆದ ಭಕ್ತರು ಎಣ್ಣೆಹಚ್ಚಿ ಪೂಜಿಸಿದರು.

ಜಾತ್ರೆ ಡಿ. 13ರಿಂದ 18ರವರೆಗೆ ನೆರವೇರಲಿದೆ. ಡಿಸೆಂಬರ್‌ 13ಕ್ಕೆ ಮಾಣಿಕ­ಪ್ರಭುಗಳ 147ನೇ ಪುಣ್ಯತಿಥಿ ಕಾರ್ಯಕ್ರಮದೊಂದಿಗೆ ಉತ್ಸವ ಆರಂಭಗೊಂಡು 14ರಂದು ಪ್ರಭು ದ್ವಾದಶಿ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಲಿವೆ. 15ರಂದು ದಕ್ಷಿಣಾ ದರ್ಬಾರ್‌, 16ಕ್ಕೆ ಗುರುಪೂಜೆ, 17ರಂದು ಪ್ರಭುಗಳ 196ನೇ ಜಯಂತಿ.

18ರಂದು ದತ್ತ ದರ್ಬಾರ್‌ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಂಗೀತ ದರ್ಬಾರ್‌ ಕಾರ್ಯಕ್ರಮಗಳು ನೆರವೇರಲಿವೆ.

ಸಂಸ್ಥಾನದ ಆನಂದರಾಜ ಪ್ರಭು, ಚೈತನ್ಯರಾಜ ಪ್ರಭು ಇದ್ದರು.  ತೀರ್ಥಸ್ನಾನ ಹಿನ್ನೆಲೆಯಲ್ಲಿ ರಾಜ್ಯ ಮಾತ್ರವಲ್ಲದೇ ಆಂಧ್ರ, ಮಹಾರಾಷ್ಟ್ರ­ಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.