ADVERTISEMENT

ಮಿನಿ ವಿಧಾನಸೌಧ ಶೌಚಾಲಯಕ್ಕೆ ನಿರ್ವಹಣೆ ಬರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 7:47 IST
Last Updated 11 ಡಿಸೆಂಬರ್ 2013, 7:47 IST

ಭಾಲ್ಕಿ: ಶುಚಿತ್ವಕ್ಕೊಂದು ಮಾದರಿ­ಯಾಗಿ­ರಬೇಕಾದ ಇಲ್ಲಿನ ಮಿನಿ ವಿಧಾನ ಸೌಧದಲ್ಲಿನ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ನಿರ್ವಹಣಾ ಕೊರತೆಯಿಂದ ಬಳಕೆಗೆ ಬಾರದಂಥ ಸ್ಥಿತಿಗೆ ತಲುಪಿವೆ.    ನೀರಿನ ಸರಬರಾಜಿಲ್ಲದ್ದಕ್ಕೆ ಕುಡಿ­ಯುವ ನೀರಿನ ಖಾಲಿ ಬಾಟಲ್‌ಗಳು ಬಳಸಿ ಅಲ್ಲಿಯೇ ಬಿಸಾಡಿದ ದೃಶ್ಯಗಳು ಬಹುತೇಕ ಇಲಾಖೆಗಳ ಕಚೇರಿಗಳ ಶೌಚಾಲಯಗಳಲ್ಲಿ ಕಂಡು ಬರುತ್ತಿವೆ. ಕೈ ತೊಳೆದುಕೊಳ್ಳುವ ವಾಶ್‌ ಬೇಸಿನ್‌ಗಳು ಗುಟ್ಕಾ ತಿಂದು ಉಗುಳಿದ ಕಲೆಗಳಿಂದ ತುಂಬಿ ಹೋಗಿವೆ.

ಅಡಳಿತ ಕೇಂದ್ರವಾಗಿರುವ ಮಿನಿ­ವಿಧಾನ ಸೌಧದ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎನ್ನುತ್ತಾರೆ ಹಿರಿಯರಾದ ರಾಚಪ್ಪ ಗೋರ್ಟೆ, ಅಪ್ಪಾಸಾಬ ದೇಶಮುಖ್‌. ಹಲವು ಇಲಾಖೆಗಳ ಮುಖ್ಯ ಕಚೇರಿಗಳಿರುವ ಮಿನಿ ವಿಧಾನ ಸೌಧವು ಹೊರಗಡೆಯಿಂದ ಸುಂದರವಾಗಿ ಕಾಣುವಷ್ಟು ಒಳಗಡೆ ಹೊಲಸೆದ್ದು ಹೋಗಿದೆ.

ಒಳಾಂಗಣದ ಪ್ರವೇಶ ದ್ವಾರದಿಂದ ಹಿಡಿದು ಮೇಲಂತಸ್ತು, ಮೆಟ್ಟಿಲುಗಳು, ಕಚೇರಿಗಳ ಕೋಣೆಗಳ ಮೂಲೆ ಮೂಲೆಗಳಲ್ಲೂ ಗುಟ್ಕಾ ತಂಬಾಕು ತಿಂದು ಉಗುಳಿರುವ ದೃಶ್ಯ ಕಣ್ಣಿಗೆ ರಾಚುತ್ತಿವೆ. ನಿತ್ಯವೂ ಸಹಸ್ರಾರು ಸಂಖ್ಯೆಯಲ್ಲಿ ಬರುವ ಸಾರ್ವಜನಿಕರಿಗೆ ಬಳಸಲು ಶೌಚಾಲಯಗಳಿಲ್ಲ.

ಅಧಿಕಾರಿ­ಗಳು ಮತ್ತು ಸಿಬ್ಬಂದಿಗೆ ಮಾಡಿರುವ ಶೌಚಾಲಯಗಳ ಸ್ಥಿತಿಯಂತೂ ಕಣ್ಣು, ಮೂಗು ಮುಚ್ಚಿಕೊಳ್ಳುವಷ್ಟು ಹದ­ಗೆಟ್ಟಿವೆ. ಇದರಿಂದ ಸೊಳ್ಳೆಗಳ ಕಾಟ, ದುರ್ಗಂಧದ ವಾತಾವರಣ ರಾಚು­ತ್ತಿದೆ. ಈಗಲಾದರೂ ಪರಿಸ್ಥಿತಿಯ ಸುಧಾರಣೆಯತ್ತ  ತಹಶೀ­­ಲ್ದಾರ್‌   ತುರ್ತು ಗಮನ ಹರಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.