ADVERTISEMENT

ಮುಖ್ಯ ಗುರುಗಳಿಗೇ ಅತಿಥಿ ಶಿಕ್ಷಕರ ನೇಮಕ ಅಧಿಕಾರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 4:45 IST
Last Updated 12 ಆಗಸ್ಟ್ 2012, 4:45 IST

ಬೀದರ್: ಜಿಲ್ಲೆಯ ವಿವಿಧ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕ್ರಮವಾಗಿ ಈಗ ಗೌರವಧನದ ಆಧಾರದಲ್ಲಿ ಅರ್ಹ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಆಯಾ ಪ್ರೌಢಶಾಲೆಗಳ ಮುಖ್ಯ ಗುರುಗಳಿಗೆ ನೀಡಲಾಗಿದೆ.

ಜಿಲ್ಲೆಯಲ್ಲಿ ಲಭ್ಯ ಮಾಹಿತಿ ಅನುಸಾರ ಒಟ್ಟಾರೆ 134 ಶಿಕ್ಷಕ ಹುದ್ದೆಗಳು ಪ್ರೌಢಶಾಲೆಗಳ ಮಟ್ಟದಲ್ಲಿ ಖಾಲಿ ಉಳಿದಿವೆ. ಶೈಕ್ಷಣಿಕ ವರ್ಷ ಆರಂಭವಾಗಿ ಮೂರು ತಿಂಗಳೇ ಕಳೆದಿದ್ದರೂ ಇನ್ನೂ ಶಿಕ್ಷಕರ ಹುದ್ದೆಗಳು ಖಾಲಿ ಇರುವ ಬಗೆಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಆಕ್ಷೇಪಗಳು ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

`ಈಗ ಮುಖ್ಯ ಗುರುಗಳಿಗೆ ಖಾಲಿ ಇರುವ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಮಾಸಿಕ ರೂ. 6000 ಗೌರವಧನದ ಆಧಾರದ ಮೇಲೆ ನೇಮಕ ಮಾಡುವ ಅಧಿಕಾರವನ್ನು ನೀಡಲಾಗಿದೆ. ಈ ಬಗೆಗೆ ಸರ್ಕಾರದ ಆದೇಶ ಬಂದಿದ್ದು, ಅದರಂತೆ ಶಿಕ್ಷಕರನ್ನು ನೇಮಿಸಿ ವರದಿ ನೀಡಲು ಮುಖ್ಯ ಗುರುಗಳಿಗೆ ಸೂಚಿಸಲಾಗಿದೆ~ ಎಂದು ಡಿಡಿಪಿಐ ಬಸಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ಆದರೆ, ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇದು ಅನ್ವಯವಾಗುವುದಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 321 ಶಿಕ್ಷಕ ಹುದ್ದೆಗಳು ಖಾಲಿ ಉಳಿದಿದ್ದು, ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಯಡಿ (ಬಿಆರ್‌ಜಿಎಫ್) ಮಾಸಿಕ ರೂ. 5000 ಗೌರವ ವೇತನದ ಆಧಾರದಲ್ಲಿ ತಾವೇ (ಡಿಡಿಪಿಐ) ಜಿಲ್ಲಾ ಮಟ್ಟದಲ್ಲಿ ನೇಮಕ ಪ್ರಕ್ರಿಯೆ ನಡೆಲಿದ್ದೇವೆ ಎಂದರು.

ಬಿ.ಎ., ಬಿ.ಎಡ್., ಬಿ.ಎಸ್‌ಸಿ. ಬಿ.ಎಡ್ ವಿದ್ಯಾರ್ಹತೆಯ ಅರ್ಹ ಶಿಕ್ಷಕರನ್ನು ಒಂದು ವರ್ಷದ ಅವಧಿಗೆ ಮಾಸಿಕ ರೂ. 6,000 ಗೌರವಧನದ ಆಧಾರದ ಮೇಲೆ ಮುಖ್ಯ ಗುರುಗಳು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಈ ತೀರ್ಮಾನದ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಶಿಕ್ಷಕರ ಕೊರತೆ ಸಮ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.

ಜಿಲ್ಲೆಯಲ್ಲಿ ವಿಷಯವಾರು ಕಲಾ ಕನ್ನಡ 19, ಉರ್ದು ಕಲಾ 3, ಮರಾಠಿ ಕಲಾ 3, ಕನ್ನಡ ಭಾಷೆ 40, ಉರ್ದು 1, ಮರಾಠಿ ಭಾಷಿಕ ಶಿಕ್ಷಕರು  5  ಸಂಖ್ಯೆಯಲ್ಲಿ ಕೊರತೆ ಇದೆ. ಅಂತೆಯೇ ಸಿಬಿಝಡ್ 11 (ಕನ್ನಡ, ಉರ್ದು, ಮರಾಠಿ), ಪಿಸಿಎಂ 10, ಆಂಗ್ಲ ವಿಷಯದ ಶಿಕ್ಷಕ ಹುದ್ದೆಗಳು 31 ಖಾಲಿ ಉಳಿದಿವೆ.

ಇನ್ನೊಂದೆಡೆ, ಪ್ರಾಥಮಿಕ ಶಾಲೆಗಳಲ್ಲಿ 321 ಹುದ್ದೆಗಳು ಖಾಲಿ ಉಳಿದಿದ್ದರೂ. ಅವುಗಳ ಭರ್ತಿ ನಿಟ್ಟಿನಲ್ಲಿ ಪ್ರಗತಿಯಾಗಿಲ್ಲ.  ಈ ಹುದ್ದೆಗಳಿಗೆ ಗೌರವಧನದ ಆಧಾರದಲ್ಲಿ ನೇಮಕ ಮಾಡಲು ಹಿಂದಿನ ವರ್ಷದಂತೆ ಈ ವರ್ಷವೂ 1.25 ಕೋಟಿ ರೂಪಾಯಿ ಅನ್ನು ಜಿಲ್ಲಾ ಪಂಚಾಯಿತಿಯು ಬಿಆರ್‌ಜಿಎಫ್ ಅನುದಾನದಲ್ಲಿ ಒದಗಿಸಿದೆ.

ಪ್ರಾಥಮಿಕ ಶಾಲೆಗಳಿಗೆ ಪಿಯುಸಿ, ಬಿಎಡ್ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಮಾಸಿಕ ರೂ. 5000 ಗೌರವಧನದ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಿಸಲು ಅವಕಾಶವಿದೆ. ಡಿಡಿಪಿಐ ಈ ನಿಟ್ಟಿನಲ್ಲಿ ಇನ್ನೂ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.